ಬೆಂಗಳೂರು: 2022-23ರ ರಾಜ್ಯ ಬಜೆಟ್ನಲ್ಲಿ ರಾಜ್ಯದಲ್ಲಿ ಕೃಷಿ ಉತ್ಪಾದತೆಯನ್ನು ಹೆಚ್ಚಿಸಲು, ಕೃಷಿ ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನ ವೆಚ್ಚದ ಭಾರವನ್ನು ಕಡಿಮೆ ಮಾಡಲು ಪ್ರತಿ ಎಕರೆಗೆ 250 ರೂ. ಗಳಂತೆ ಗರಿಷ್ಟ 5 ಎಕರೆಗೆ 1250 ರೂ. ರವರೆಗೆ ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಮೂಲಕ ಡೀಸಲ್ ಸಹಾಯಧನಕ್ಕಾಗಿ “ರೈತ ಶಕ್ತಿ” ಯೋಜನೆಯಡಿ ಸೌಲಭ್ಯ ಪಡೆಯಲು ರೈತರು ಫ್ರೂಟ್ಸ್ ಪೋರ್ಟಲ್ನಲ್ಲಿ ನೋಂದಾಯಿಸಬೇಕೆಂದು ಹೇಳಲಾಗಿದೆ.
ಸೌಲಭ್ಯ ಪಡೆಯುವ ಯಾವುದೇ ರೈತರು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆಯಿರುವುದಿಲ್ಲ. ಫ್ರೂಟ್ಸ್/ FRUITS (Farmers Registration and Unified Beneficiary information System) portal ನಲ್ಲಿನ ನೋಂದಣಿಯಂತೆ ರೈತರ ಹಿಡುವಳಿಯ ಆಧಾರದ ಮೇಲೆ ಪ್ರತಿಯೊಬ್ಬ ರೈತರಿಗೆ ಪ್ರತಿ ಎಕರೆಗೆ 250 ರೂ.ನಂತೆ ಗರಿಷ್ಟ 5 ಎಕರೆಗೆ 1250 ರೂ.ರವರೆಗೆ ಡೀಸೆಲ್ ಸಹಾಯಧನ ಒದಗಿಸಲಾಗುವುದು.
ಫ್ರೂಟ್ಸ್/FRUITS (Farmers Registration and Unified Beneficiary information System) ಕರ್ನಾಟಕ ಸರ್ಕಾರ ಇ-ಇಲಾಖೆಯ ಪೋರ್ಟಲ್ ಆಗಿದ್ದು, ಕಂದಾಯ ಇಲಾಖೆಯ “ಭೂಮಿ” (Bhoomi) ಪೋರ್ಟಲ್ ನೊಂದಿಗೆ ಸಂಯೋಜಿಸಲಾಗಿದ್ದು, ರೈತರ ಭೂ ಹಿಡುವಳಿಯ ವಿವರವನ್ನು ವಿಳಾಸ ಮತ್ತು ಬ್ಯಾಂಕ್ ವಿವರದೊಂದಿಗೆ ನೋಂದಾಯಿಸಿ ರೈತರಿಗೆ ಗುರುತಿನ ಸಂಖ್ಯೆ/ FID (farmer ID) ನೀಡಲಾಗುವುದು.
ಈಗಾಗಲೇ ಸಾಕಷ್ಟು ರೈತರು ಫ್ರೂಟ್ಸ್/FRUITS portal ನಲ್ಲಿ ಕೆಲವು ಸರ್ವೆ ನಂಬರ್/ ಭೂ ಹಿಡುವಳಿಯೊಂದಿಗೆ ನೋಂದಾಯಿಸಿಕೊಂಡಿದ್ದು, ಪ್ರತಿ ಎಕರೆಗೆ ಡೀಸೆಲ್ ಸಹಾಯಧನವನ್ನು ಎಕರೆವಾರು ನೀಡುವುದರಿಂದ ತಮ್ಮ ಉಳಿದ ಎಲ್ಲಾ ಸರ್ವೆ ನಂಬರ್/ ಭೂ ಹಿಡುವಳಿಗಳನ್ನು ಸೇರಿಸುವುದು.
ಫ್ರೂಟ್ಸ್/FRUITS portal ನಲ್ಲಿ ರೈತರ ವಿವರ ನೋಂದಣಿಯಾಗಿರದಿದ್ದಲ್ಲಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಖಾತೆ/ಪಹಣಿ ವಿವರ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಕಚೇರಿಗಳಲ್ಲಿ ರೈತರು ತಮ್ಮ ಎಲ್ಲಾ ಸರ್ವೆ ನಂಬರ್/ ಭೂ ಹಿಡುವಳಿಗಳನ್ನು ಸೇರಿಸುವುದರೊಂದಿಗೆ ನೋಂದಾಯಿಸಿಕೊಳ್ಳುವುದು.
ಬರಗಾಲ ಮತ್ತು ಪ್ರವಾಹ ಸಂದರ್ಭದಲ್ಲಿ ಬೆಳೆ ನಷ್ಟ ಪರಿಹಾರ ವಿತರಿಸಲು, ಬೆಂಬಲ ಬೆಲೆ ಯೋಜನೆಯಲ್ಲಿ ಕೃಷಿ ಉತ್ಪನ್ನ ಖರೀದಿಸಲು, ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಪಡೆಯಲು, ಕೃಷಿ/ ತೋಟಗಾರಿಕೆ/ ರೇಷ್ಮೆ ಮತ್ತು ಇತರೆ ಇಲಾಖೆಗಳಲ್ಲಿ ಸವಲತ್ತುಗಳನ್ನು ಪಡೆಯಲು ಫ್ರೂಟ್ಸ್/FRUITS portal ನಲ್ಲಿ ನೋಂದಣಿ ಅಗತ್ಯವಾಗಿರುವುದರಿಂದ ರೈತರು ನೋಂದಣಿ ಮಾಡಿಸಬೇಕೆಂದು ಹೇಳಲಾಗಿದೆ.