ಲಂಡನ್: ನೀವು ಎಂದಾದರೂ ವಿಶಿಷ್ಟವಾದ ಪಕ್ಷಿ ಅಥವಾ ಹಿಂದೆಂದೂ ನೋಡಿರದ ಪ್ರಾಣಿಯನ್ನು ಗುರುತಿಸಿದ್ದೀರಾ? ಉದಾಹರಣೆಗೆ ಪಾರಿವಾಳ ಯಾವ ಬಣ್ಣ ಹೊಂದಿರುತ್ತದೆ..? ಅವು ಸಾಮಾನ್ಯವಾಗಿ ನೀಲಿ-ಬೂದು ಬಣ್ಣವನ್ನು ಹೊಂದಿರುತ್ತದೆ ಅಲ್ವಾ.. ಆದರೆ, ಇಲ್ಲೊಂದೆಡೆ ಕಂಡು ಬಂದ ಪಾರಿವಾಳದ ವಿಶಿಷ್ಟ ಬಣ್ಣ ನೋಡಿ ಮಹಿಳೆಯೊಬ್ಬಳು ಶಾಕ್ ಆಗಿದ್ದಾಳೆ.
ಬರ್ನ್ಲಿಯ ಮಹಿಳೆಯೊಬ್ಬಳು ಪ್ರಕಾಶಮಾನವಾದ ಗುಲಾಬಿ ಪಾರಿವಾಳವನ್ನು ಕಂಡು ಅಚ್ಚರಿಗೊಂಡಿದ್ದಾಳೆ. ಕೆಲ್ಲಿ ಮೇರಿ ಲುನ್ನಿ ನೆಲ್ಸನ್‌ನಲ್ಲಿರುವ ತನ್ನ ತಾಯಿಯನ್ನು ಭೇಟಿ ಮಾಡುತ್ತಿದ್ದಾಗ ಉದ್ಯಾನದಲ್ಲಿ ವಿಶಿಷ್ಟವಾದ ಪಕ್ಷಿಯನ್ನು ಗುರುತಿಸಿದ್ದಾಳೆ. ಅಪರೂಪದ ಹಕ್ಕಿಯನ್ನು ಕಂಡು ಆಕೆ ಗೊಂದಲಕ್ಕೊಳಗಾಗಿದ್ದಾಳೆ. ಮೊದಲಿಗೆ ಆಕೆ ತಾನು ಭ್ರಮೆ ಹೊಂದಿರಬಹುದು ಎಂದು ಭಾವಿಸಿದ್ದಾಳೆ.
ಆದರೆ, ಮೇಲ್ಛಾವಣಿಗಳ ನಡುವೆ ಹಾರುವ ಮತ್ತು ಹುಳಗಳನ್ನು ತಿನ್ನುವ ಗುಲಾಬಿ ಹಕ್ಕಿಯನ್ನು ಕಂಡಾಗ ತಾನು ನಿಜವಾಗಿಯೂ ಕನಸು ಕಾಣುತ್ತಿಲ್ಲ ಅನ್ನೋದು ಖಚಿತವಾಗಿದೆ.
ಈ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಹಲವಾರು ಮಂದಿ ಹಕ್ಕಿಯ ಸತ್ಯಾಸತ್ಯತೆಯ ಬಗ್ಗೆ ಆಕ್ಷೇಪಣೆಗಳನ್ನು ಎತ್ತಿದ್ದಾರೆ. ಇದು ಕೇವಲ ಗುಲಾಬಿ ಬಣ್ಣವನ್ನು ಹೊಂದಿರುವ ಸಾಮಾನ್ಯ ಪಾರಿವಾಳವಾಗಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಸಂಶೋಧನೆಗಳನ್ನೇ ನಡೆಸಿದ್ದಾರೆ. ಇದು ಮಾರಿಷಸ್ ದ್ವೀಪಕ್ಕೆ ಸ್ಥಳೀಯವಾಗಿರುವ ನೆಸೊನಾಸ್ ಮಾಯೆರಿ ಗುಲಾಬಿ ಪಾರಿವಾಳವಾಗಿರಬಹುದು ಎಂದು ತಿಳಿಸಿದ್ದಾರೆ.