ನವದೆಹಲಿ: ಈ ಬಾರಿ ನೈರುತ್ಯ ಮಾನ್ಸೂನ್ ಬೇಗನೆ ಆಗಮಿಸಲಿದೆ. ಮೇ 15 ರಂದೇ ನೈರುತ್ಯ ಮಾನ್ಸೂನ್ ಆಗಮನದ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆಯಿಂದ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಸಾಮಾನ್ಯವಾಗಿ ಮೇ ಕೊನೆ ಇಲ್ಲವೇ ಜೂನ್ ಮೊದಲವಾರದಲ್ಲಿ ಮುಂಗಾರು ಆರಂಭವಾಗುತ್ತದೆ. ಆದರೆ, ಈ ಬಾರಿ ಮುಂಗಾರು ಮೇ 15 ರಿಂದಲೇ ಆರಂಭವಾಗಲಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 15 ರಂದು ಮೊದಲ ಋತುಮಾನದ ಮಳೆಯಾಗಲಿದೆ, ಇದರೊಂದಿಗೆ ನೈರುತ್ಯ ಮಾನ್ಸೂನ್ ಬೇಗನೆ ಆಗಮಿಸಲಿದೆ ಎಂದು ಹವಾಮಾನ ಕಚೇರಿ ಗುರುವಾರ ತಿಳಿಸಿದೆ.
ನೈಋತ್ಯ ಮಾನ್ಸೂನ್ 2022 ರ ಮೇ 15 ರ ಸುಮಾರಿಗೆ ದಕ್ಷಿಣ ಅಂಡಮಾನ್ ಸಮುದ್ರ ಮತ್ತು ಪಕ್ಕದ ಆಗ್ನೇಯ ಬಂಗಾಳ ಕೊಲ್ಲಿಗೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕೇರಳದ ಮೂಲಕ ಮುಂಗಾರು ಪ್ರವೇಶಕ್ಕೆ ಉತ್ತರಾಭಿಮುಖ ಚಲನೆಗೆ ಅನುಕೂಲಕರವಾದ ಪರಿಸ್ಥಿತಿ ಇದೆ ಎಂದು ಹವಾಮಾನ ವಿಜ್ಞಾನಿಗಳು ಹೇಳಿದ್ದಾರೆ.
ಮುಂದಿನ ಐದು ದಿನಗಳಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ತಕ್ಕಮಟ್ಟಿಗೆ ವ್ಯಾಪಕವಾದ ಲಘು / ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಮೇ 14 ರಿಂದ ಮೇ 16 ರವರೆಗೆ ವಾಯುಭಾರ ಭಾರೀ ಕುಸಿತವಾಗಲಿದ್ದು,. ಮೇ 15 ಮತ್ತು ಮೇ 16 ರಂದು ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ 40-50 ಕಿಮೀ ನಿಂದ 60 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹೇಳಲಾಗಿದೆ.