ಚೆನ್ನೈ: ಚಲಿಸುತ್ತಿದ್ದ ಖಾಸಗಿ ಬಸ್ನಿಂದ ಬಿದ್ದು 15 ವರ್ಷದ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ತಮಿಳುನಾಡಿನ ನಾಮಕ್ಕಲ್ನಲ್ಲಿ ನಡೆದಿದೆ.
ಬಾಲಕಿಯು ಇಂಗ್ಲೀಷ್ ಪರೀಕ್ಷೆ ಬರೆಯಲು ಖಾಸಗಿ ಬಸ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದಳು. ಬಾಲಕಿಯನ್ನು ಈಶ್ವರಮೂರ್ತಿಪಾಳ್ಯಂನ ದಿನಗೂಲಿ ಕಾರ್ಮಿಕನ ಪುತ್ರಿ ಇನಿಯಾಶ್ರೀ ಎಂದು ಗುರುತಿಸಲಾಗಿದೆ.
ಶಾಲಾ ಬಸ್ ತಪ್ಪಿದ ಹಿನ್ನೆಲೆಯಲ್ಲಿ ಖಾಸಗಿ ಬಸ್ ಹತ್ತಿದ ಇನಿಯಶ್ರೀ ದಿಮ್ಮನಾಯಕನಪಟ್ಟಿಯಲ್ಲಿ ಇಳಿಯಬೇಕಾಯಿತು. ಆದರೆ, ದಿಮ್ಮನಾಯಕನಪಟ್ಟಿಯಲ್ಲಿ ಬಸ್ ನಿಲುಗಡೆ ಮಾಡುವುದಿಲ್ಲ ಎಂದು ಖಾಸಗಿ ಬಸ್ ಕಂಡಕ್ಟರ್ ವಿದ್ಯಾರ್ಥಿನಿಗೆ ಹೇಳಿದ್ದು, ಬಸ್ ವೇಗ ನಿಧಾನವಾಗುತ್ತಿದ್ದಂತೆ ಕೆಳಗಿಳಿಯುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಇಂಗ್ಲೀಷ್ ಪರೀಕ್ಷೆಯ ಬಗ್ಗೆ ಚಿಂತೆಗೆ ಒಳಗಾಗಿದ್ದ ಇನಿಯಾಶ್ರೀ, ಚಲಿಸುತ್ತಿದ್ದ ವಾಹನದಿಂದ ಕೆಳಗಿಳಿಯಲು ಯತ್ನಿಸಿದ್ದಾಳೆ. ಈ ವೇಳೆ ಕಾಲು ಜಾರಿ ಬಿದ್ದು ತಲೆಗೆ ಗಂಭೀರ ಗಾಯವಾಗಿದೆ. ಇಡೀ ಘಟನೆ ಬಸ್ಸಿನ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಸಹ ಪ್ರಯಾಣಿಕರು ಖಾಸಗಿ ಬಸ್ ಕಂಡಕ್ಟರ್ ನಿರ್ಲಕ್ಷ್ಯವನ್ನು ದೂಷಿಸಿದ್ದಾರೆ. ಆದರೆ, ಪೊಲೀಸರು ಕಂಡಕ್ಟರ್ ಮತ್ತು ಚಾಲಕನ ಮೇಲೆ ಪ್ರಕರಣ ದಾಖಲಿಸಿಲ್ಲ ಎಂದು ಇನಿಯಶ್ರೀ ಸಂಬಂಧಿಕರು ಆರೋಪಿಸಿದ್ದಾರೆ.