ರಾಜ್ಕೋಟ್: ಗುಜರಾತಿನ ರಾಜ್ಕೋಟ್ ಜಿಲ್ಲೆಯಿಂದ 30 ಕಿಮೀ ದೂರದಲ್ಲಿರುವ ಲೋಧಿಕಾ ತಾಲೂಕಿನ ಮಾಗಾಣಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಸಿಂಹವೊಂದು ಪ್ರತ್ಯಕ್ಷವಾಗಿದ್ದು, ಈ ಸಿಂಹದೊಂದಿಗೆ ನಾಯಿಯೊಂದು ಜೊತೆಯಲ್ಲೇ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೇಸಿಗೆ ಬೆಳೆಗಳನ್ನು ರಕ್ಷಿಸಲು ರೈತರು ಹೊಲದತ್ತ ಆಗಮಿಸುತ್ತಿದ್ದು, ಅಲ್ಲಿಯೇ ಬಯಲು ಪ್ರದೇಶದಲ್ಲಿ ಸುತ್ತಾಡುತ್ತಿರುವ ಸಿಂಹದ ಚಲನವಲನಗಳ ಜೊತೆ ನಾಯಿಯು ಯಾವುದೆ ಭಯವಿಲ್ಲದೇ ಅದರೊಟ್ಟಿಗೆ ಓಡಾಡುತ್ತಿರುವ ಅಪರೂಪದ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸ್ಥಳೀಯ ನಾಯಕರ ಮಾಹಿತಿಯ ಮೇರೆಗೆ ಈಗಾಗಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸಿಬ್ಬಂದಿ ಸಿಂಹದ ಸೆರೆ ಹಿಡಿದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿ ಸಂದೀಪ್ ಕುಮಾರ್, ಸಿಂಹವನ್ನು ಸೆರೆಹಿಡಿದು ಗಿರ್ ಅಭಯಾರಣ್ಯದಲ್ಲಿ ಇರಿಸಲಾಗಿದೆ. ಆದರೆ ಸಿಂಹ ಮತ್ತು ನಾಯಿಯ ನಡುವಿನ ಅಸಾಧಾರಣ ಸ್ನೇಹ ಎಲ್ಲರನ್ನೂ ಬೆರಗುಗೊಳಿಸಿದೆ ಎಂದು ಹೇಳಿದರು.
ಈ ಹಿಂದೆ ಮೌಂಟ್ ಕೀನ್ಯಾ ರಾಷ್ಟ್ರೀಯ ಉದ್ಯಾನವನದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಮೇರು ಕೌಂಟಿಯ ಮುತಿರಿಬು ಗ್ರಾಮದಲ್ಲಿ ಶಾಪಿಂಗ್ ಬ್ಯಾಗ್ ಅನ್ನು ಸಿಂಹ ಎಂದು ತಿಳಿದು ಗ್ರಾಮಸ್ಥರು ಭಯಭೀತರಾದ ಘಟನೆ ನಡೆದಿತ್ತು. ಸಿಂಹ ಅಡಗಿ ಕುಳಿತಿದೆ ಎಂದು ತಿಳಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಕರೆ ಮಾಡಿದ್ದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದಾಗ ಬ್ಯಾಗ್ ಎಂದು ತಿಳಿದು ಬಂದಿದೆ.