ಬಹು-ಜನಾಂಗೀಯ ಮತ್ತು ಬಹು-ಧಾರ್ಮಿಕ ಸಮಾಜದಲ್ಲಿ ಸಾಮರಸ್ಯವನ್ನು ಹಾಳುಮಾಡಬಹುದು ಎಂಬ ಕಳವಳದಿಂದ ಸಿಂಗಾಪುರ್ ನಲ್ಲಿ ಬಾಲಿವುಡ್ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ನಿಷೇಧಿಸಲಾಗಿದೆ.
ಮುಸಲ್ಮಾನರ ಪ್ರಚೋದನಕಾರಿ ಮತ್ತು ಏಕಪಕ್ಷೀಯ ಚಿತ್ರಣ ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಸಂಘರ್ಷದಲ್ಲಿ ಹಿಂದೂಗಳ ಮೇಲೆ ಕಿರುಕುಳದ ಚಿತ್ರಣಕ್ಕಾಗಿ ಚಲನಚಿತ್ರ ಪದರ್ಶಿಸಲು ನಿರಾಕರಿಸಲಾಗಿದೆ. ಇದು ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡಬಹುದು. ಅಲ್ಲದೆ ಬಹು-ಜನಾಂಗೀಯ ಮತ್ತು ಬಹು-ಧರ್ಮೀಯ ಸಮಾಜದಲ್ಲಿ ಸಾಮಾಜಿಕ ಒಗ್ಗಟ್ಟು ಮತ್ತು ಧಾರ್ಮಿಕ ಸಾಮರಸ್ಯವನ್ನು ಅಡ್ಡಿಪಡಿಸುವ ಕಳವಳದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸಿಂಗಾಪುರ ಸರ್ಕಾರದ ಹೇಳಿಕೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಭಾರತದ ಆಡಳಿತ ಪಕ್ಷ ಪ್ರಚಾರ ಮಾಡಿದ ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ಸಿಂಗಾಪುರದಲ್ಲಿ ನಿಷೇಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು, ದಯವಿಟ್ಟು ಕಾಶ್ಮೀರಿ ಹಿಂದೂ ನರಮೇಧವನ್ನು ಗೇಲಿ ಮಾಡುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.
ಅಗ್ನಿಹೋತ್ರಿ ಬರೆದು ನಿರ್ದೇಶಿಸಿದ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಭಾರತದಲ್ಲಿ ಮಾರ್ಚ್ 11 ರಂದು ಬಿಡುಗಡೆಯಾಯಿತು. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರಿಂದ ಪ್ರಶಂಸೆಗೆ ಪಾತ್ರವಾಯಿತು. ಹಲವಾರು ಬಿಜೆಪಿ ನೇತೃತ್ವದ ಸರ್ಕಾರವಿರುವ ರಾಜ್ಯಗಳಲ್ಲಿ ತೆರಿಗೆ ಮುಕ್ತಗೊಳಿಸಿದರೆ, ಅಸ್ಸಾಂ ರಾಜ್ಯ ನೌಕರರಿಗೆ ಚಿತ್ರ ವೀಕ್ಷಿಸಲು ಬಿಡುವು ನೀಡಿತು.