ನೀವು ಹೋಮ್ ಅಲೋನ್ ಚಿತ್ರವನ್ನು ವೀಕ್ಷಿಸಿದ್ದೀರಾ..? ಒಂದು ವೇಳೆ ನೋಡಿದ್ದರೆ, ಸಿನಿಮಾದಲ್ಲಿ ಬರುವ ಪಾತ್ರಧಾರಿ ಮಗುವು ಒಬ್ಬಂಟಿಯಾಗಿ ಮನೆಯಲ್ಲಿ ಹೇಗೆ ಬದುಕುಳಿಯಿತು. ಹಾಗೂ ಕಳ್ಳರನ್ನು ಹೇಗೆ ನಿಭಾಯಿಸಿತು ಎಂಬ ಬಗ್ಗೆ ತೋರಿಸಲಾಗಿದೆ. ಇದೇ ರೀತಿ ಚೀನಾದಲ್ಲೊಬ್ಬ ಬಾಲಕ ನಿಜ ಜೀವನದ ಉದಾಹರಣೆಯಾಗಿದ್ದಾನೆ.
ಚೀನಾದ ಶಾಂಘೈನಲ್ಲಿ ಕೊರೋನಾ ವೈರಸ್ ಲಾಕ್‌ಡೌನ್‌ನಲ್ಲಿ ತನ್ನ ಹೆತ್ತವರು ಸಿಕ್ಕಿಬಿದ್ದಿದ್ದರಿಂದ 66 ದಿನಗಳ ಕಾಲ ಮನೆಯಲ್ಲಿ ಒಬ್ಬಂಟಿಯಾಗಿದ್ದ. 13 ವರ್ಷದ ಬಾಲಕ ಕಳೆದ ಎರಡು ತಿಂಗಳಿಂದ ಮನೆಯಲ್ಲಿಯೇ ವಾಸಿಸುತ್ತಿದ್ದ. ಬೆಕ್ಕು ಮತ್ತು ನಾಯಿ ಕೂಡ ಆತನ ಜೊತೆಯಲ್ಲಿತ್ತು.
ವರದಿ ಪ್ರಕಾರ, ಬಾಲಕನ ಪೋಷಕರು ಫೆಬ್ರವರಿ 28 ರಂದು ವೈದ್ಯಕೀಯ ಚಿಕಿತ್ಸೆ ಪಡೆಯಲು ಶಾಂಘೈಗೆ ಪ್ರಯಾಣ ಬೆಳೆಸಿದ್ದಾರೆ. ದುರದೃಷ್ಟವಶಾತ್, ಲಾಕ್‌ಡೌನ್ ಘೋಷಿಸಿದ್ದರಿಂದ ಅವರು ಅಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಏಪ್ರಿಲ್ ಅಂತ್ಯದವರೆಗೆ ತಮ್ಮ ಮಗನನ್ನು ಭೇಟಿಯಾಗಲು ಅವರಿಂದ ಸಾಧ್ಯವಾಗಿಲ್ಲ.
ಘಟನೆಯನ್ನು ನೆನಪಿಸಿಕೊಳ್ಳುತ್ತಾ ಬಾಲಕನ ತಾಯಿ, ತಮ್ಮ ಮಗು ನೈತಿಕವಾಗಿ ಅವರು ಯೋಚಿಸಿದ್ದಕ್ಕಿಂತ ಬಲಶಾಲಿ ಎಂದು ಹೇಳಿದ್ದಾರೆ. ಪ್ಯಾಕೇಜ್ ಮಾಡಿದ ಆಹಾರಗಳನ್ನು ತಿನ್ನಲು ಬೇಸತ್ತ ಮಗು ತನ್ನ ತಾಯಿಯಿಂದ ಫೋನ್ ಮೂಲಕ ಅಡುಗೆ ಕಲಿಯಲು ಮುಂದಾಗಿದ್ದಾನೆ. ಏಪ್ರಿಲ್‌ನಲ್ಲಿ ಪೋಷಕರು ಮನೆಗೆ ಹಿಂತಿರುಗಿದಾಗ, ಬಾಲಕ ಮತ್ತು ಎರಡು ಸಾಕುಪ್ರಾಣಿಗಳು ತಮ್ಮ ಅನುಪಸ್ಥಿತಿಯಲ್ಲೂ ದಪ್ಪಗಾಗಿದ್ದರು. ಇದು ಪೋಷಕರಿಗೆ ಅಚ್ಚರಿ ತರಿಸಿತ್ತು.
ಬಾಲಕ ಬೆಕ್ಕಿನ ಮಲ, ಮೂತ್ರ ವಿಸರ್ಜಿಸುವ ಪೆಟ್ಟಿಗೆಯನ್ನು ಸ್ವಚ್ಛಗೊಳಿಸುತ್ತಿದ್ದನು. ಹಾಗೆಯೇ ನಾಯಿಯನ್ನು ವಾಕ್ ಮಾಡಲು ಕರೆದೊಯ್ಯುತ್ತಿದ್ದ. ಸಾಕುಪ್ರಾಣಿಗಳಿಗೆ ನಿಯಮಿತವಾಗಿ ಸ್ನಾನ ಮಾಡಿಸುತ್ತಿದ್ದನಂತೆ. ಹೀಗೆ 66 ದಿನಗಳ ಕಾಲ ತಾನೇ ಅಡುಗೆ ಮಾಡಿ ಊಟ ಮಾಡುತ್ತಿದ್ದ ಬಾಲಕನ ಶೌರ್ಯಕ್ಕೆ ಪೋಷಕರು ಕೊಂಡಾಡಿದ್ದಾರೆ.