ಚೆನ್ನೈ: ಅತಿಕ್ರಮಣ ವಿರೋಧಿ ಅಭಿಯಾನದಡಿ ಮನೆ ಕಳೆದುಕೊಂಡು ಎಷ್ಟೋ ಮಂದಿಗೆ ಬೀದಿಗೆ ಬಂದಿದ್ದಾರೆ. ಅಂಗಡಿಗಳನ್ನು ಕಳೆದು ಪೈಸೆ ಪೈಸೆಗೂ ಕಷ್ಟಪಡುತ್ತಿದ್ದಾರೆ. ಇದೀಗ ಈ ಕಾರ್ಯಾಚರಣೆಯಡಿ ಮನೆ ಕಳೆದುಕೊಂಡ ಮಹಿಳೆಯೊಬ್ಬರು ರಸ್ತೆಯಲ್ಲಿ ಕುಳಿತು ಅಡುಗೆ ಮಾಡುತ್ತಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಈ ಫೋಟೋವನ್ನು ಎಎನ್ಐ ಸಂಸ್ಥೆ ಹಂಚಿಕೊಂಡಿದ್ದು, ಸುತ್ತಲೂ ಮನೆಗಳು ಬಿದ್ದಿರುವುದರ ಮಧ್ಯೆಯೇ ಮಣ್ಣಿನ ಮೇಲೆಯೇ ಕುಳಿತು ಮಹಿಳೆ ಇಟ್ಟಿಗೆಗಳನ್ನು ಇಟ್ಟು ಅಡುಗೆ ಮಾಡುತ್ತಿರುವುದನ್ನು ಕಾಣಬಹುದು.
ಮಹಿಳೆಯನ್ನು ಪ್ರಿಯಾ ಎಂದು ಗುರುತಿಸಲಾಗಿದೆ. ನಮ್ಮ ಬಳಿ ಮನೆಯ ಬಗ್ಗೆ ಎಲ್ಲಾ ದಾಖಲೆಗಳಿವೆ. ನಮಗೆ ಯಾವುದೇ ಮಾಹಿತಿ ನೀಡದೆ ಮನೆಯನ್ನು ಕೆಡವಿದ್ದಾರೆ. ನನಗೆ ಬೇರೆಡೆ ಹೋಗಲು ಎಲ್ಲಿಯೂ ವ್ಯವಸ್ಥೆ ಇಲ್ಲದ ಕಾರಣ ನಾನು ಬೀದಿಯಲ್ಲಿಯೇ ಅಡುಗೆ ಮಾಡಲು ಶುರು ಮಾಡಿದೆ ಎಂದು ಪ್ರಿಯಾ ಹೇಳಿಕೊಂಡಿದ್ದಾರೆ.
ಬಾಳೆಹಣ್ಣಿನ ಸಿಪ್ಪೆ ಬಿಸಾಡುವ ಮೊದಲು ಇದನ್ನೊಮ್ಮೆ ಓದಿ…..!
ಒಂದು ಮನೆಯಲ್ಲಿ ಮೂವರು ಸದಸ್ಯರು ಇದ್ದರೆ ಮಾತ್ರ ವಸತಿ ಯೋಜನೆಯಡಿ ಮನೆ ಕಲ್ಪಿಸುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಇದೀಗ ನಮ್ಮ ಮನೆಗೆಡವಿ ನಮ್ಮನ್ನು ನಿರಾಶ್ರಿತರನ್ನಾಗಿ ಮಾಡಿದ್ದಾರೆ. ನನ್ನ ಜೊತೆ ವಯಸ್ಸಾದ ತಾಯಿ ಜೊತೆಗೆ ಮಕ್ಕಳಿದ್ದಾರೆ. ನಾನು ಈ ಜಾಗ ಬಿಟ್ಟು ಎಲ್ಲಿಯೂ ಕದಲುವುದಿಲ್ಲ ಎಂದು ಹೇಳಿದರು.
ಕಳೆದ ತಿಂಗಳಿಂದ ನವದೆಹಲಿ, ಚೆನ್ನೈ ಸೇರಿದಂತೆ ವಿವಿಧೆಡೆ ಅತಿಕ್ರಮಣ ವಿರೋಧಿ ಅಭಿಯಾನ ನಡೆಯುತ್ತಿವೆ. ದಕ್ಷಿಣ ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ದಕ್ಷಿಣ ದೆಹಲಿಯ ಶಾಹೀನ್ ಬಾಗ್ನಲ್ಲಿ ಅತಿಕ್ರಮಣ ವಿರೋಧಿ ಅಭಿಯಾನವನ್ನು ನಡೆಸಿತು. ಈ ಹಿಂದೆ ಒಬ್ಬ ಹುಡುಗ ಅಂಗಡಿ ಅವಶೇಷಗಳಡಿ ಬಿದ್ದಿರುವ ನಾಣ್ಯಗಳನ್ನು ಆರಿಸುತ್ತಿರುವ ಫೋಟೋ ವೈರಲ್ ಆಗಿತ್ತು.