ಮುಂಬೈ: ಹನುಮಾನ್ ಚಾಲೀಸಾ ಪ್ರಕರಣ ಸಂಬಂಧ ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅಮರಾವತಿ ಸಂಸದೆ ನವನೀತ ರಾಣಾ ಮತ್ತು ಶಾಸಕ ರವಿ ರಾಣಾ ದಂಪತಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಹಾರಾಷ್ಟ್ರ ಆಡಳಿತಾಧಿಕಾರಿಗಳ ದುರ್ವರ್ತನೆ ಬಗ್ಗೆ ಮಾತನಾಡಲು ನಿರ್ಧರಿಸಿದ್ದಾರೆ.
ಜೈಲಿನಲ್ಲಿದ್ದ ವೇಳೆ ಮಹಾರಾಷ್ಟ್ರ ಅಧಿಕಾರಿಗಳು ತಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ಆರೋಪಿಸಿ, ಮೋದಿ, ಅಮಿತ್ ಶಾ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನವನೀತ್ ರಾಣಾ, ಬಿಜೆಪಿ ಬೆನ್ನಿಗೆ ಚೂರಿ ಹಾಕಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ತತ್ವಗಳ ಬಗ್ಗೆ ಮಾತನಾಡಬಾರದು ಮತ್ತು ರಾಣಾ ದಂಪತಿಗೆ ಕಲಿಸಲು ಬರಬಾರದು ಎಂದು ಕಿಡಿಕಾರಿದ್ದಾರೆ.
ನಾವು ಇಂದು ದೆಹಲಿಗೆ ತೆರಳಿ ಮಹಿಳೆಯರನ್ನು ಗೌರವಿಸುವ ಎಲ್ಲಾ ನಾಯಕರನ್ನು ಭೇಟಿಯಾಗುತ್ತೇವೆ. ನಾನು ಪ್ರಧಾನಿ, (ಕೇಂದ್ರ) ಗೃಹ ಸಚಿವರು ಮತ್ತು ಲೋಕಸಭಾ ಸ್ಪೀಕರ್ ಅವರನ್ನು ಭೇಟಿ ಮಾಡಿ ಬಂಧನವಾದ ದಿನದಿಂದ ಹಿಡಿದು ಜೈಲಿನವರೆಗೆ ನಮ್ಮನ್ನು ಹೇಗೆ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು ವಿವರಿಸುತ್ತೇನೆ. ನಾನು ಅದರ ಬಗ್ಗೆ ದೂರು ನೀಡಲಿದ್ದೇನೆ ಎಂದು ಹೇಳಿದರು.
ಶಿವಸೇನಾ ಸಂಸದ ಸಂಜಯ್ ರಾಣಾ ಅವರನ್ನು “ಗಿಣಿ” ಎಂದು ಬಣ್ಣಿಸಿದ ನವನೀತ್, ರಾಣಾ ದಂಪತಿಗಳನ್ನು ಸಮಾಧಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ನಾನು ಇಲ್ಲಿ ದೂರು ನೀಡಿದೆ. ಆದರೆ ಇಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ಹಾಗಾಗಿ ಈ ವಿಷಯವನ್ನು ಪ್ರಸ್ತಾಪಿಸಲು ನಾನು ದೆಹಲಿಗೆ ಹೋಗುತ್ತಿದ್ದೇನೆ. ತನ್ನಂತಹ ನಾಯಕಿಯನ್ನು ಇವರು ಈ ರೀತಿಯಲ್ಲಿ ನಡೆಸಿಕೊಂಡರೆ ಸಾಮಾನ್ಯರ ಪಾಡೇನು? ಈ ಹಿನ್ನೆಲೆ ನಾನು ಮಾತನಾಡಬೇಕಿದೆ. ಸಾರ್ವಜನಿಕ ಪ್ರತಿನಿಧಿಯಾಗಿ ನಾನು ಮಾತನಾಡಲು ಸಂವಿಧಾನ ನನಗೆ ಹಕ್ಕು ನೀಡಿದೆ. ನನ್ನ ಹಕ್ಕುಗಳನ್ನು ಯಾರು ಕಸಿದುಕೊಳ್ಳಲಾಗದು. ಇನ್ನು ಸಿಎಂ ಠಾಕ್ರೆ ಅವರು ತಮ್ಮ ಹಿಂದಿನ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರಿಂದ ರಾಜ್ಯವನ್ನು ಹೇಗೆ ನಡೆಸಬೇಕೆಂದು ಕಲಿಯಬೇಕು ಎಂದು ಹೇಳಿದರು.
ಮೇ 4 ರಂದು ದಂಪತಿಗೆ ಜಾಮೀನು ನೀಡುವ ಸಂದರ್ಭದಲ್ಲಿ, ಇದೇ ರೀತಿಯ ಅಪರಾಧವನ್ನು ಪುನಃ ಮಾಡಬಾರದು ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಮಾಧ್ಯಮದವರ ಎದುರು ಮಾತನಾಡಬಾರದು ಎಂದು ಎಚ್ಚರಿಕೆ ನೀಡಿತ್ತು.
ಏಪ್ರಿಲ್ 23 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ ‘ಮಾತೋಶ್ರೀ’ ಹೊರಗೆ ‘ಹನುಮಾನ್ ಚಾಲೀಸಾ’ ಪಠಿಸುವುದಾಗಿ ನವನೀತ ರಾಣಾ ಮತ್ತು ಶಾಸಕ ರವಿ ರಾಣಾ ಘೋಷಿಸಿದ್ದರು. ಈ ನಿಮಿತ್ತ ದಂಪತಿಯನ್ನು ಮುಂಬೈ ಪೊಲೀಸರು ಬಂಧನಕ್ಕೊಳಪಡಿಸಿದರು.