ಗುಜರಾತ್‌ನ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಮ್‌ಸಿ) ವಾರ್ಡ್‌ನ ಮತಗಳ ಮರು ಎಣಿಕೆ ಶನಿವಾರ ನಡೆದು ಬಿಜೆಪಿ ಅಭ್ಯರ್ಥಿ ವಿಜೇತರಾಗಿದ್ದಾರೆ ಎಂದು ಘೋಷಿಸಲಾಗಿದೆ. ಇಲ್ಲಿ 2021ರ ಜನವರಿಯಲ್ಲಿ ಚುನಾವಣೆ ನಡೆದಿತ್ತು.
ಫಲಿತಾಂಶದ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಆದೇಶದ ಪ್ರಕಾರ, ವರ್ಷದ ಬಳಿಕ ಮರು ಮತ ಎಣಿಕೆ ನಡೆದಿತ್ತು.
ಈ ರೀತಿ ವಿರಳ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದು ಕುಬೇರನಗರದ 14ನೇ ವಾರ್ಡ್. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಮೊಹ್ನಾನಿ ಅವರು ಬಿಜೆಪಿಯ ಗೀತಾಬೆನ್ ಚಾವ್ಡಾ ವಿರುದ್ಧ ಸೋಲು ಕಂಡಿದ್ದಾರೆ. “ಕಳೆದ ವರ್ಷದ ಫೆಬ್ರವರಿಯಲ್ಲಿ ನಡೆದ ಮತ ಎಣಿಕೆ ವೇಳೆ ಸಿಕ್ಕ ಫಲಿತಾಂಶ ಪ್ರಕಾರ ಇಬ್ಬರು ಅಭ್ಯರ್ಥಿಗಳು ಪಡೆದ ಮತಗಳಲ್ಲಿ ಈಗಲೂ ಯಾವುದೇ ಬದಲಾವಣೆ ಆಗಿಲ್ಲ. ಗೀತಾಬೆನ್ ಚಾವ್ಡಾ 17,656 ಮತಗಳನ್ನು ಗಳಿಸಿದರೆ, ಮೊಹ್ನಾನಿ 16,992 ಮತಗಳನ್ನು ಪಡೆದರು” ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
113 ಕ್ಕೂ ಅಧಿಕ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕ ಅರೆಸ್ಟ್
ಇದಕ್ಕೂ ಮುನ್ನ ಏಪ್ರಿಲ್ 26 ರಂದು ಸುಪ್ರೀಂ ಕೋರ್ಟ್ “ಚುನಾವಣಾ ಪ್ರಕ್ರಿಯೆಯಲ್ಲಿನ ಎಲ್ಲಾ ಅನುಮಾನಗಳನ್ನು ನಿವಾರಿಸಲು ಸೂಕ್ತವಾದ ಕ್ರಮ” ಎಂದು ಮತಗಳನ್ನು ಮರು ಎಣಿಕೆ ಮಾಡಲು ಆದೇಶಿಸಿತ್ತು. ಕಳೆದ ವರ್ಷ ಫೆಬ್ರವರಿ 23 ರಂದು ನಡೆದ ಮತ ಎಣಿಕೆಯಲ್ಲಿ ಮೊಹ್ನಾನಿ ಅವರನ್ನು ಮೊದಲ ಬಾರಿಗೆ ವಿಜೇತರೆಂದು ಘೋಷಿಸಲಾಯಿತು, ಕ್ಲೆರಿಕಲ್ ದೋಷದಿಂದಾಗಿ ಒಂಬತ್ತನೇ ಸುತ್ತಿನಲ್ಲಿ ಪಡೆದ ಮತಗಳನ್ನು ಲೆಕ್ಕಕ್ಕೆ ಸೇರಿಸಲಾಗಿಲ್ಲ. ಕೆಲವು ದಿನಗಳ ನಂತರ, ಫೆಬ್ರವರಿ 26 ರಂದು, ಚುನಾವಣಾಧಿಕಾರಿಯು ಹೆಚ್ಚಿನ ಮತಗಳೊಂದಿಗೆ ಚಾವ್ಡಾ ನಿಜವಾದ ವಿಜಯಿ ಎಂದರು. ಎಣಿಕೆ ದೋಷದಿಂದಾಗಿ ಮೋಹ್ನಾನಿ ಅವರನ್ನು ತಪ್ಪಾಗಿ ವಿಜೇತ ಎಂದು ಘೋಷಿಸಲಾಗಿತ್ತೆಂದು ಹೇಳಿದ್ದರು.
ಚುನಾವಣಾ ಅಧಿಕಾರಿಯ ಕ್ರಮವನ್ನು ಪ್ರಶ್ನಿಸಿ ಮೊಹ್ನಾನಿ ಗುಜರಾತ್ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಬಳಿಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 2021 ಫೆಬ್ರವರಿ 23 ರಂದು ನಡೆದ 10 ನೇ ಮತ್ತು ಅಂತಿಮ ಸುತ್ತಿನ ಎಣಿಕೆಯಲ್ಲಿ ದೋಷವಾಗಿತ್ತು ಎಂದು ರಾಜ್ಯ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ತಿಳಿಸಿದೆ. ಕಳೆದ ವರ್ಷ ಜನವರಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಎಎಂಸಿಯಲ್ಲಿ ಆಡಳಿತಾರೂಢ ಬಿಜೆಪಿ 159 ಮತ್ತು ಕಾಂಗ್ರೆಸ್ 24 ಸ್ಥಾನಗಳನ್ನು ಗೆದ್ದಿತ್ತು.