ಸಮಷ್ಟಿಪುರ: ನೀಚ ತಂದೆ ತನ್ನ ಮಗಳ ಮೇಲೆ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ನಡೆದಿದೆ. ಕಿರಾತಕ ತಂದೆ ಅತ್ಯಾಚಾರವೆಸಗಿರುವ ವಿಡಿಯೋ ವೈರಲ್ ಆಗಿದ್ದು, ಆತನನ್ನು ಬಂಧಿಸಲಾಗಿದೆ.
ವೃತ್ತಿಯಲ್ಲಿ ಶಿಕ್ಷಕನಾಗಿರುವ 50 ವರ್ಷದ ಆರೋಪಿಯು, ಸಮಷ್ಟಿಪುರದ ರೋಸೆರಾ ನಿವಾಸಿಯಾಗಿದ್ದಾನೆ. ಆತನ 18 ವರ್ಷದ ಮಗಳು ತನ್ನ ಮೇಲೆ ತಂದೆ ಅತ್ಯಾಚಾರ ಮತ್ತು ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದಾಳೆ.
ವರದಿಯ ಪ್ರಕಾರ, ಸಂತ್ರಸ್ತೆ ತನ್ನ ತಂದೆಯನ್ನು ಆರೋಪಿ ಎಂದು ಸಾಕ್ಷಿ ಸಹಿತ ಬಹಿರಂಗಪಡಿಸಲು ಗುಪ್ತ ಕ್ಯಾಮರಾವನ್ನು ಬಳಸಿ, ಹಲ್ಲೆಯ ವಿಡಿಯೋವನ್ನು ಚಿತ್ರೀಕರಿಸಿದ್ದಾಳೆ. ತನ್ನ ತಂದೆ ತನ್ನ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು ನ್ಯಾಯ ಕೇಳಿದ್ದಾಳೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ, ಮಗಳ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿ ತಂದೆಯನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ಹೇಳಿಕೆ ಆಧರಿಸಿ ಕಾನೂನು ಕ್ರಮ ಜರುಗಿಸಲಾಗುತ್ತಿದ್ದು, ಇತರೆ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಮಧ್ಯೆ, ಪೊಲೀಸರು ಆರೋಪಿ ತಂದೆಯನ್ನು ವಿಚಾರಣೆಗೆ ಒಳಪಡಿಸಿದ್ದು, ಪ್ರಕರಣದಲ್ಲಿ ಇತರ ಆರೋಪಿಗಳು ಇದ್ದಾರೆಯೇ ಎಂದು ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತೆಯ ತಾಯಿಯು ಹಲ್ಲೆಯನ್ನು ವಿರೋಧಿಸಲಿಲ್ಲ ಮತ್ತು ಘಟನೆಯ ಬಗ್ಗೆ ಮೌನವಾಗಿರುವಂತೆ ಆಕೆಯ ಸಂಬಂಧಿ ಒತ್ತಡ ಹೇರುತ್ತಿದ್ದರು ಎಂದು ಆರೋಪಿಸಲಾಗಿದೆ.