ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರು ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಆದರೂ ಸಹ ಇವರಿಬ್ಬರೂ ತಮ್ಮ ಸಂಬಂಧವನ್ನು ಖಚಿತಪಡಿಸಿಲ್ಲ. ಈ ವರ್ಷದ ಕೊನೆಯಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರೀಕ್ಷೆಯಿದೆ. ಕೆಲವು ದಿನಗಳ ಹಿಂದೆ, ಮಾಧ್ಯಮ ವರದಿಯೊಂದು ಮದುವೆಯ ನಂತರ ಮುಂಬೈನಲ್ಲಿ ಬಾಡಿಗೆಗೆ ಪಡೆದ ನಾಲ್ಕು ಬೆಡ್ ರೂಮ್ ಗಳ ಅಪಾರ್ಟ್ಮೆಂಟ್ನಲ್ಲಿ ಇಬ್ಬರೂ ಒಟ್ಟಿಗೆ ವಾಸಿಸುತ್ತಾರೆ ಎಂದೆಲ್ಲಾ ಸುದ್ದಿಗಳು ಹರಿದಾಡಿದ್ದವು. ಆದರೆ ಈಗ ಈ ವದಂತಿಗಳಿಗೆ ಅಥಿಯಾ ತೆರೆ ಎಳೆದಿದ್ದಾರೆ. ತಾನು ತನ್ನ ಹೆತ್ತವರ ಜೊತೆ ಹೊಸ ಮನೆಗೆ ಹೋಗುತ್ತಿದ್ದೇನೆ, ಬೇರೆಯವರ ಜೊತೆಯಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಥಿಯಾ, ಹೊಸ ಮನೆ ತನಗೆ ಮತ್ತು ತನ್ನ ಕುಟುಂಬಕ್ಕೆ ಸೇರಿದ್ದು ಎಂದು ಹೇಳಿದ್ದಾರೆ. ಅಥಿಯಾ ಮತ್ತು ಕೆ.ಎಲ್. ರಾಹುಲ್ ತಮ್ಮ ಸಂಬಂಧವನ್ನು ಅಧಿಕೃತಗೊಳಿಸದಿದ್ದರೂ, ಈ ಜೋಡಿ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರರ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ, ರಾಹುಲ್ ಹುಟ್ಟುಹಬ್ಬದಂದು ಅವರು ಒಟ್ಟಿಗೆ ಇರುವ ಒಂದೆರಡು ಫೋಟೋಗಳೊಂದಿಗೆ ಆಥಿಯಾ ಶುಭ ಹಾರೈಸಿದ್ದರು.
ಕೆಲವು ವರದಿಗಳ ಪ್ರಕಾರ, ಅಥಿಯಾ ಅವರ ತಂದೆ ಸುನೀಲ್ ಶೆಟ್ಟಿ ತಮ್ಮ ಮಗಳ ಮದುವೆಯನ್ನು ದಕ್ಷಿಣ ಭಾರತದ ಶೈಲಿಯಲ್ಲಿ ಅದ್ಧೂರಿಯಾಗಿ ಮಾಡಲು ವ್ಯವಸ್ಥೆ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದೀಗ ಅಥಿಯಾ ಸಹೋದರ, ನಟ ಅಹಾನ್ ಶೆಟ್ಟಿ ಕೂಡ ಅಂತಹ ಯಾವುದೇ ಬೆಳವಣಿಗೆಗಳು ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ವಿವಾಹ ಸಮಾರಂಭದ ವ್ಯವಸ್ಥೆಯೇನು ನಡೆಯುತ್ತಿಲ್ಲ. ಇದೆಲ್ಲವೂ ಕೇವಲ ವದಂತಿಗಳಷ್ಟೇ. ಮದುವೆಯೇ ಇಲ್ಲದಿರುವಾಗ, ನಾವು ನಿಮಗೆ ಮದುವೆ ದಿನಾಂಕ ಯಾವಾಗ ಎಂದು ಹೇಗೆ ನೀಡುವುದು? ಎಂದಿದ್ದಾರೆ.