ಮಳೆ ಬರುತ್ತಿದ್ರೆ ಅಥವಾ ವಿಪರೀತ ಚಳಿಯ ವಾತಾವರಣವಿದ್ರೆ ಒಂದು ಕಪ್ ಬಿಸಿ ಬಿಸಿ ಚಹಾ ಸೇವಿಸೋಣ ಎಂದೆನಿಸೋದು ಮನುಷ್ಯ ಸಹಜ ಗುಣ. ಇದೀಗ ನೇಪಾಳದ ಮೌಂಟ್ ಎವರೆಸ್ಟ್ ಕ್ಯಾಂಪ್-2 ನಲ್ಲಿ ಪರ್ವತಾರೋಹಿಗಳ ಗುಂಪೊಂದು ಟೀ ಪಾರ್ಟಿ ಮಾಡಿದೆ.
ಹೌದು, ಈ ಪಾರ್ಟಿಯನ್ನು ಆಯೋಜಿಸುವ ಮೂಲಕ ಗುಂಪು ಅತಿ ಹೆಚ್ಚು ಟೀ ಪಾರ್ಟಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸಹ ಪಡೆದುಕೊಂಡಿತು. ಆಂಡ್ರ್ಯೂ ಹ್ಯೂಸ್, ತನ್ನ ಅತ್ಯುತ್ತಮ ಟೀ ಪಾರ್ಟಿ ತಂಡದೊಂದಿಗೆ ಮೌಂಟ್ ಎವರೆಸ್ಟ್ ಕ್ಯಾಂಪ್-2ನಲ್ಲಿ ಅತಿ ಎತ್ತರದ ಚಹಾ ಕೂಟವನ್ನು ಆಯೋಜಿಸುವ ವಿಶ್ವದಾಖಲೆಯನ್ನು ಮಾಡಿದ್ದಾರೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ, ಎವರೆಸ್ಟ್ನಲ್ಲಿ ಮಾಡಿರುವ ಟೀ ಪಾರ್ಟಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದಟ್ಟವಾದ ಮಂಜಿನ ನಡುವೆ ಅತ್ಯುನ್ನತ ಟೀ ಪಾರ್ಟಿ ಮಾಡಲಾಗಿದೆ. ಸ್ಥಳದಲ್ಲಿ ಕುಕೀಸ್ ಮತ್ತು ಮಗ್ಗಳು ಇರುವುದನ್ನು ವಿಡಿಯೋದಲ್ಲಿ ನೋಡಬಹುದು. ಥರ್ಮೋಸ್ನಿಂದ ಚಹಾವನ್ನು ಸುರಿದ ತಕ್ಷಣ ಪಾರ್ಟಿ ಪ್ರಾರಂಭವಾಗುತ್ತದೆ.
ಹಿಮದ ತಾಜಾ ಹೊದಿಕೆ ಹಾಗೂ ಒಮ್ಮೆಲೆ ಬೀಳುತ್ತಿದ್ದ ಮಂಜಿನ ಮಧ್ಯೆ, ಈ ತಂಡವು ಹೇಗೆ ಟೀ ಪಾರ್ಟಿ ಮಾಡಿತು ಎಂಬ ಬಗ್ಗೆ ಆಂಡ್ರ್ಯೂ ವಿವರಿಸಿದ್ದಾರೆ.
ದಾಖಲೆಯು ಸರಳವಾಗಿ ಕಂಡುಬಂದರೂ, ಮೌಂಟ್ ಎವರೆಸ್ಟ್ ಕ್ಯಾಂಪ್-2 ನಲ್ಲಿ ಚಹಾವನ್ನು ಹೀರುವ ಮೊದಲು ತಂಡವು ಹುರುಪಿನ ತರಬೇತಿಯನ್ನು ಪಡೆಯಬೇಕಾಗಿತ್ತು. ಆಂಡ್ರ್ಯೂ ಅವರು ಒತ್ತಡವನ್ನು ಕಡಿಮೆ ಮಾಡಲು ಮತ್ತು ಸಹ ಆರೋಹಿಗಳಿಗೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಚಹಾವನ್ನು ರೆಕಾರ್ಡ್ಗಾಗಿ ಆಯ್ಕೆ ಮಾಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.