ಜೀವಾವಧಿ ಶಿಕ್ಷೆಯು ಆರೋಪಿಯ ಜೀವಿತಾವಧಿಯವರೆಗೂ ಇರುವುದರಿಂದ ಈ ಶಿಕ್ಷೆಗೆ ಇಷ್ಟೇ ವರ್ಷ ಎಂದು ನಿಗದಿಪಡಿಸಲು ಸಾಧ್ಯವಿಲ್ಲ ಅಂತಾ ಅಲಹಾಬಾದ್ ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಸುಭಾಷ್ ಚಂದ್ರ ಶರ್ಮಾ ಅವರಿದ್ದ ಪೀಠವು 1997 ರ ಹಿಂದಿನ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಐವರು ಕೊಲೆ ಅಪರಾಧಿಗಳಿಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ಹೀಗೆ ಹೇಳಿದೆ.
ಇನ್ನೊಂದು ಗಮನಾರ್ಹ ವಿಚಾರ ಏನೆಂದರೆ ಈ ಆರೋಪಿಗಳಲ್ಲಿ ಕಲ್ಲು ಎಂಬಾತ ಈ ಮೊದಲೇ 20 ರಿಂದ 21 ವರ್ಷ ಜೈಲು ವಾಸವನ್ನು ಅನುಭವಿಸಿದ್ದ. ಕಲ್ಲುಗೆ ಜೀವಾವಧಿ ಶಿಕ್ಷೆ ಘೋಷಣೆಯಾದ ಬಳಿಕ ಅವರನ್ನು ಬಿಡುಗಡೆ ಮಾಡುವುದನ್ನು ಅನುಮತಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಜೀವಾವಧಿ ಶಿಕ್ಷೆಯು ಅಪರಾಧಿಯ ಜೀವಿತ ಅವಧಿಯವರೆಗೂ ಇರುವುದರಿಂದ ಈ ಶಿಕ್ಷೆಗೆ ಇಷ್ಟೇ ವರ್ಷ ಎಂದು ನಿಗದಿಪಡಿಸಲು ಆಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಐವರು ಕೊಲೆ ಆರೋಪಿಗಳು ಸಲ್ಲಿಸಿದ್ದ ಮೂರು ಸಂಬಂಧಿತ ಮೇಲ್ಮನವಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ. ಈ ಪೈಕಿ ಒಬ್ಬರು ಮೇಲ್ಮನವಿಯ ಬಾಕಿ ಇರುವಾಗ ಮರಣ ಹೊಂದಿದ್ದರಿಂದ, ಅವರ ಪರವಾಗಿ ಮನವಿಯನ್ನು ರದ್ದುಗೊಳಿಸಲಾಯಿತು.
ಎಲ್ಲಾ ಐವರು ಆರೋಪಿಗಳು ( ಕಲ್ಲು, ಫೂಲ್ ಸಿಂಗ್, ಜೋಗೇಂದ್ರ(ಮೃತಪಟ್ಟವರು), ಹರಿ ಹಾಗೂ ಚರಣ್) 12 ಬೋರ್ ಗನ್ ಹಾಗೂ ರೈಫಲ್ಗಳಿಂದ ಜೈ ಸಿಂಗ್ ಎಂಬಾತನನ್ನು ಕೊಲೆ ಮಾಡಿದ್ದರು.