
ನವದೆಹಲಿ: ಅಡುಗೆ ಎಣ್ಣೆ ದರ ಗಗನಕ್ಕೇರಿದ್ದು, ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಬೆಲೆ ನಿಯಂತ್ರಿಸಲು ಖಾದ್ಯ ತೈಲದ ಮೇಲಿನ ತೆರಿಗೆಯನ್ನು ಶೇಕಡ 5 ರಷ್ಟು ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ.
ತಾಳೆ ಎಣ್ಣೆ ಸೇರಿ ಸಸ್ಯಜನ್ಯ ಎಣ್ಣೆಗಳನ್ನು ಬಹುದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಭಾರತ ಕಚ್ಚಾ ತಾಳೆ ಎಣ್ಣೆ ಮೇಲಿನ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ತೆರಿಗೆಯನ್ನು ಶೇಕಡ 5 ರಷ್ಟು ಕಡಿತ ಮಾಡಲು ನಿರ್ಧರಿಸಿದೆ. ಇದರಿಂದ ಖಾದ್ಯ ತೈಲ ದರ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತು ಮೇಲೆ ನಿರ್ಬಂಧ ವಿಧಿಸಿದೆ. ಇದರಿಂದ ಮಾರುಕಟ್ಟೆಯಲ್ಲಿ ಖಾದ್ಯ ತೈಲ ದರ ಭಾರೀ ಏರಿಕೆ ಕಂಡಿದೆ. ಬೆಲೆ ನಿಯಂತ್ರಣದ ಉದ್ದೇಶದಿಂದ ಸರ್ಕಾರ ತೆರಿಗೆ ಕಡಿತ ಮಾಡಲು ತೀರ್ಮಾನಿಸಿದೆ. ಕಚ್ಚಾ ತಾಳೆ ಎಣ್ಣೆ ಮೇಲಿನ ಮೂಲಭೂತ ತೆರಿಗೆಯನ್ನು ಈಗಾಗಲೇ ಕೈಬಿಡಲಾಗಿದೆ. ಇದರ ಮುಂದುವರೆದ ಭಾಗವಾಗಿ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ತೆರಿಗೆಯನ್ನು ಕಡಿತಗೊಳಿಸಲು ತೀರ್ಮಾನಿಸಿದೆ ಎನ್ನಲಾಗಿದೆ.