ಬೆಂಗಳೂರು: ಮದ್ಯಪ್ರಿಯರಿಗೆ ರಾಜ್ಯದಲ್ಲಿ ನಾಳೆಯಿಂದ 15 ದಿನಗಳ ಕಾಲ ಮದ್ಯ ಸಿಗುವುದಿಲ್ಲ. ಮದ್ಯ ಮಾರಾಟಗಾರರು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದು, ಎಣ್ಣೆ ಪ್ರಿಯರಿಗೆ ಶಾಕ್ ನೀಡಿದ್ದಾರೆ.
ಈ ಕುರಿತು ಉಡುಪಿಯಲ್ಲಿ ಮಾತನಾಡಿರುವ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನಕಾರ್ಯದರ್ಶಿ ಗೋವಿಂದ್ ರಾಜ್ ಹೆಗ್ಡೆ, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಕೆ ಎಸ್ ಪಿ ಸಿ ಎಲ್ ಎಂಡಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳಾಗಲಿ, ಅಬಕಾರಿ ಸಚಿವರಾಗಲಿ ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ. ಹಾಗಾಗಿ ನಮ್ಮ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ರಾಜ್ಯಾದ್ಯಂತ 15 ದಿನಗಳ ಕಾಲ ನಿರಂತರ ಹೋರಾಟ ನಡೆಸುತ್ತಿದ್ದೇವೆ ಎಂದರು.
ಒಂದು ದಿನ ಮದ್ಯ ಖರೀದಿ ಮಾಡದಿದ್ದರೆ ರಾಜ್ಯದಲ್ಲಿ 70 ಕೋಟಿ ನಷ್ಟ ಆಗುತ್ತೆ. ವಿಭಾಗ ಮಟ್ಟದಲ್ಲಿ ಮದ್ಯ ಖರೀದಿ ನಿಲ್ಲಿಸಲು ನಿರ್ಧರಿಸಿದ್ದೇವೆ. ಮೇ 19ರವರೆಗೂ ಮುಷ್ಕರ ನಡೆಯಲಿದೆ ಎಂದರು.
ಮೇ 6ರಂದು ಗುಲಬರ್ಗ, ಬೀದರ್, ರಾಯಚೂರು, ಯಾದಗಿರಿ, ಮೇ10 ರಂದು ಹೊಸಪೇಟೆ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಧಾರವಾಡ, ಹಾವೇರಿ. ಮೇ 12ರಂದು ಮೈಸೂರು, ಚಿಕ್ಕಮಗಳೂರು, ಹಾಸನ, ಮಂಡ್ಯ, ಮಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಉಡುಪಿ. ಮೇ 17ರಂದು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ವಿಭಾಗಗಳಲ್ಲಿ ಮದ್ಯ ಮಾರಾಟ ನಿಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.