ಬೆಳಗಾವಿ: ಮಸೀದಿಗಳ ಆಜಾನ್ ನಿಲ್ಲಿಸಲು ನೀಡಲಾಗಿದ್ದ ಗಡುವು ಮುಗಿದರೂ ಮೈಕ್ ತೆರವಿಗೆ ಸರ್ಕಾರ ಮುಂದಾಗದ ಹಿನ್ನೆಲೆಯಲ್ಲಿ ಮೇ 9ರಿಂದ ಶ್ರೀರಾಮಸೇನೆ ಬೃಹತ್ ಓಂಕಾರ ನಾಮಸ್ಮರಣೆ ಅಭಿಯಾನ ಹಮ್ಮಿಕೊಂಡಿದೆ.
ಬೆಳಗಾವಿಯಲ್ಲಿ ಮಾತನಾಡಿದ ಮುತಾಲಿಕ್, ಸಾವಿರಕ್ಕೂ ಅಧಿಕ ದೇವಸ್ಥಾನಗಳಲ್ಲಿ ಓಂಕಾರ ನಾಮಸ್ಮರಣೆ ಮಾಡಲಾಗುವುದು. ಮುಂಜಾನೆ 5 ಗಂಟೆಗೆ ಪೂಜೆ ಸಲ್ಲಿಸಿ ಸುಪ್ರಭಾತ ಭಜನೆಯೊಂದಿಗೆ ಆರಂಭವಾಗಲಿದೆ ಎಂದಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ ಮಸೀದಿ, ಚರ್ಚ್ ಮಂದಿರಗಳಿಗೆ ಮೈಕ್ ತೆರವುಗೊಳಿಸಲು ನೋಟೀಸ್ ಕೊಟ್ಟು ಸುಮ್ಮನಾಗಿದೆ. ಈ ಮೂಲಕ ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಆಜ್ಞೆ ಉಲ್ಲಂಘನೆಯಾಗುತ್ತಿದೆ. ಹಾಗಾಗಿ ಮೇ.9ರಿಂದ ರಾಜ್ಯಾದ್ಯಂತ ಒಂದು ಸಾವಿರ ದೇವಾಲಯಗಳಲ್ಲಿ ಓಂಕಾರ ನಿನಾದ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಅಂದು ಆಜಾನ್ ಆರಂಭಕ್ಕೂ ಮುನ್ನ ಸುಪ್ರಭಾತ ಮೊಳಗಬೇಕು. ಸರ್ಕಾರ ಮುಸ್ಲಿಂ ಓಟ್ ಗಾಗಿ ಆಜಾನ್ ನಿಲ್ಲಿಸಲು ಹೆದರುತ್ತದೆ. ಈ ಹೋರಾಟದಲ್ಲಿ ನಾನೊಬ್ಬನೇ ಇಲ್ಲ, ಶ್ರೀರಾಮಸೇನೆಯ ನೂರಾರು ಕಾರ್ಯಕರ್ತರು, ಹಿಂದೂಪರ ಸಂಘಟನೆಯ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.