ರಾಜಸ್ಥಾನದ ಜೈಪುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೊಲೆಯ ಸುಳಿವು ನೀಡಿದ್ದ ಪ್ರಮುಖ ಸಾಕ್ಷ್ಯವನ್ನು ಕೋತಿಯೊಂದು ಹೊತ್ತೊಯ್ದಿದೆ. ಜೈಪುರದ ಚಾಂದ್ವಾಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನ ಹತ್ಯೆ ನಡೆದಿತ್ತು.
ಹತ್ಯೆಗೆ ಬಳಸಿದ್ದ ಚಾಕು ಸೇರಿದಂತೆ ಇತರ ವಸ್ತುಗಳನ್ನು ಕೋತಿಯೊಂದು ಹೊತ್ತುಕೊಂಡು ಪರಾರಿಯಾಗಿದೆ ಅಂತ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕೇಸ್‌ನಲ್ಲಿ ಆಗಿನ ಮಲ್ಖಾನಾ ಉಸ್ತುವಾರಿ ಹನುಮಾನ್ ಸಹಾಯ್ ಯಾದವ್ ದೋಷಿಯೆಂದು ತೀರ್ಮಾನಿಸಲಾಗಿದೆ. ಸೇವೆಯಿಂದ ನಿವೃತ್ತರಾಗಿದ್ದ ಸಹಾಯ್, ಕಳೆದ ವರ್ಷ ಏಪ್ರಿಲ್ 3 ರಂದು ಮೃತಪಟ್ಟಿದ್ದಾರಂತೆ.
ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಪಬ್ಲಿಕ್ ಪ್ರಾಸಿಕ್ಯೂಟರ್ ಗೆ ಸಲ್ಲಿಸಿದ ವರದಿಯಲ್ಲಿ ಘಟನೆಯ ವಿವರಗಳಿವೆ. ಪೊಲೀಸ್ ಠಾಣೆಯ ಮಲ್ಖಾನಾದಲ್ಲಿ ಜಾಗ ಇರಲಿಲ್ಲ. ಹಾಗಾಗಿ ಎಲ್ಲ ಸಾಕ್ಷ್ಯಗಳನ್ನು ಪೆಟ್ಟಿಗೆಯಲ್ಲಿ ಕಟ್ಟಿ ಟಿನ್ ಶೆಡ್ ಅಡಿಯಲ್ಲಿ ಇಡಲಾಗಿತ್ತು. ಗೋದಾಮನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಆ ಚೀಲವನ್ನು ಹೊರಗಿಡಲಾಗಿತ್ತು. ಈ ವೇಳೆ ಕೋತಿ ಗೋಣಿಚೀಲದ ಸಮೇತ ಓಡಿ ಹೋಗಿದ್ದು, ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಪರಾಧ ನಡೆದ ಸ್ಥಳದ ಮಣ್ಣು, ಸ್ಥಳದಿಂದ ತೆಗೆದ ಸಿಮೆಂಟ್ ಕಾಂಕ್ರೀಟ್ ಮಾದರಿಗಳು, ಅಪರಾಧ ನಡೆದ ಸ್ಥಳದಿಂದ ಸಂಗ್ರಹಿಸಲಾದ ರಕ್ತದ ಮಾದರಿಗಳು, ಆರೋಪಿಯ ವೆಸ್ಟ್ ಮತ್ತು ಟೀ ಶರ್ಟ್, ಪ್ಲಾಸ್ಟಿಕ್ ಬಾಟಲಿ, ರಕ್ತಸಿಕ್ತ ನೀಲಿ ಜೀನ್ಸ್, ಒಳ ಉಡುಪು, ರಕ್ತಸಿಕ್ತ ಚಾಕು , ಬಿಳಿ ಮತ್ತು ಕೆಂಪು ಟೀ ಶರ್ಟ್‌ಗಳು, ಆಕಾಶ ಬಣ್ಣದ ಪೈಜಾಮ, ಥಾಂಗ್‌ಗಳು, ಮೊಬೈಲ್ ಫೋನ್‌ಗಳು ಮತ್ತು ಜಾಡಿಗಳಲ್ಲಿ ಇರಿಸಲಾದ ಇತರ ಕೆಲವು ಮಾದರಿಗಳು ಇವೆಲ್ಲವೂ ಆ ಚೀಲದಲ್ಲಿತ್ತು. 2016ರ ಸಪ್ಟೆಂಬರ್‌ನಲ್ಲಿ ಕೋತಿ ಈ ಸಾಕ್ಷಿ ಸಮೇತ ಪರಾರಿಯಾಗಿದೆ ಎಂದು ಹೇಳಲಾಗಿದೆ.
2014ರ ಸಪ್ಟೆಂಬರ್ 17ರಂದು ಶಶಿಕಾಂತ್ ಶರ್ಮಾ ಎಂಬಾತನ ಮೃತದೇಹ ಚಂದ್ವಾಜಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಹತ್ಯೆ ಖಂಡಿಸಿ ಪ್ರತಿಭಟನೆಯೂ ನಡೆದಿತ್ತು. ಪ್ರಕರಣ ಸಂಬಂಧ ಪೊಲೀಸರು ಮೋಹನ್‌ಲಾಲ್ ಕುಂದರಾ ಮತ್ತು ರಾಹುಲ್ ಕುಂದರಾನನ್ನು ಬಂಧಿಸಿದ್ದರು. ಕೊಲೆಗೆ ಬಳಸಿದ್ದ ಚಾಕು ಸೇರಿದಂತೆ ಇತರೆ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಕೋತಿ ಎಲ್ಲ ಸಾಕ್ಷಿ ಸಮೇತ ಓಡಿ ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.