ಹಿಂದೂ ಸಹೋದರಿಯರಿಬ್ಬರು ತಮ್ಮ ತಂದೆಯವರ ಕೊನೆಯ ಆಸೆಯಂತೆ ಈದ್ಗಾ ಮೈದಾನಕ್ಕೆ 1.5 ಕೋಟಿ ರೂ. ಮೌಲ್ಯದ ಭೂಮಿ ದಾನ ಮಾಡಿರುವ ಅಪರೂಪದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಉದಾಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರ ಗ್ರಾಮದ ಸರೋಜಾ ರಸ್ತೋಗಿ ಹಾಗೂ ಅನಿತಾ ರಸ್ತೋಗಿ ಭೂಮಿ ದಾನ ಮಾಡಿದ ಸಹೋದರಿಯರಾಗಿದ್ದು, 2003 ರಲ್ಲಿ ಮೃತಪಟ್ಟ ತಮ್ಮ ತಂದೆ ಅದಕ್ಕೂ ಮುನ್ನ ಈದ್ಗಾ ಮೈದಾನಕ್ಕೆ ಹೊಂದಿಕೊಂಡಿರುವ ತಮ್ಮ ಜಮೀನಿನ ಒಂದು ಭಾಗವನ್ನು ದಾನ ಮಾಡಬೇಕೆಂಬ ಬಯಕೆ ವ್ಯಕ್ತಪಡಿಸಿದ್ದರು.
ಅದರಂತೆ ಈಗ ಸಹೋದರಿಯರು 20,400 ಚದರಡಿ ಭೂಮಿಯನ್ನು ಈದ್ಗಾ ಮೈದಾನಕ್ಕೆ ದಾನ ಮಾಡಿದ್ದು, ಪ್ರಸ್ತುತ ದೇಶದಲ್ಲೆಡೆ ಕೋಮು ಸಂಘರ್ಷ ಹೆಚ್ಚುತ್ತಿರುವ ನಡುವೆ ನಡೆದಿರುವ ಈ ಕೋಮು ಸೌಹಾರ್ದ ಬೆಸೆಯುವ ಘಟನೆ ಶ್ಲಾಘನೆಗೆ ಕಾರಣವಾಗಿದೆ.