ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ಮನುಕುಲವೇ ತಲೆ ತಗ್ಗಿಸುವಂತೆ ಮಾಡಿದೆ. ನಾಗರಿಕರನ್ನು ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೇ ಅಮಾನವೀಯ ರಾಕ್ಷಸಿ ಕೃತ್ಯವೆಸಗಿದ್ದು, ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಠಾಣೆಗೆ ದೂರು ನೀಡಲು ಬಂದ ವೇಳೆ ಆಕೆಯ ಮೇಲೆಯೇ ಅತ್ಯಾಚಾರವೆಸಗಿ ಪೈಶಾಚಿಕತೆ ಮೆರೆದಿದ್ದಾನೆ.
ಈ ಘಟನೆ ಉತ್ತರ ಪ್ರದೇಶದ ಲಲಿತ್ ಪುರದಲ್ಲಿ ನಡೆದಿದ್ದು, ಏಪ್ರಿಲ್ 22ರಂದು ನಾಲ್ವರು ಆರೋಪಿಗಳು 13 ವರ್ಷದ ಬಾಲಕಿಯನ್ನು ಅಪಹರಿಸಿ ಭೂಪಾಲ್ ಗೆ ಕರೆದೊಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಕಾಮುಕರ ಕಪಿಮುಷ್ಟಿಯಿಂದ ಹೇಗೋ ತಪ್ಪಿಸಿಕೊಂಡ ಬಾಲಕಿ ತನ್ನ ಪೋಷಕರ ಬಳಿ ಬಂದಿದ್ದು ಬಳಿಕ ಆಕೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದಳು.
ಹೀಗಿರಲಿ ನಿಮ್ಮ ʼಪಾದರಕ್ಷೆʼಯ ಆಯ್ಕೆ
ಈ ಸಂದರ್ಭದಲ್ಲಿ ಠಾಣಾಧಿಕಾರಿ ಸರೋಜ್ ಎಂಬಾತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಆದರೆ ಭಯದಿಂದ ಅಪ್ರಾಪ್ತೆ ವಿಷಯವನ್ನು ಯಾರ ಬಳಿಯೂ ಹೇಳಿರಲಿಲ್ಲ. ಆದರೆ ಆಕೆಯನ್ನು ಬಳಿಕ ಮಕ್ಕಳ ಸಾಂತ್ವನ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿನ ಸಿಬ್ಬಂದಿ ಕೌನ್ಸೆಲಿಂಗ್ ನಡೆಸಿದ ವೇಳೆ ಈ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ.
ಕೂಡಲೇ ಸಾಂತ್ವನ ಕೇಂದ್ರದ ಸಿಬ್ಬಂದಿ, ಲಲಿತ್ ಪುರ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಪಾಠಕ್ ಅವರನ್ನು ಭೇಟಿಯಾಗಿ ವಿಷಯ ವಿವರಿಸಿದ್ದಾರೆ. ಇದೀಗ ಠಾಣಾಧಿಕಾರಿ ಸರೋಜ್ ಸೇರಿದಂತೆ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಆತನನ್ನು ಉದ್ಯೋಗದಿಂದ ಅಮಾನತುಗೊಳಿಸಲಾಗಿದೆ. ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದ್ದು, ಪರಾರಿಯಾಗಿರುವ ಠಾಣಾಧಿಕಾರಿ ಸೇರಿದಂತೆ ಐವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.