ಅಲಹಾಬಾದ್: ವಿವಾಹಿತ ಮಹಿಳೆಯು ತನ್ನ ಗಂಡ ಮತ್ತೊಬ್ಬಾಕೆಯನ್ನು ವರಿಸುವುದನ್ನು ಸಹಿಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ನ್ಯಾ. ರಾಹುಲ್ ಚತುರ್ವೇದಿ ಅವರಿದ್ದ ಪೀಠವು, ತನ್ನ ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಆರೋಪಿಯೊಬ್ಬ ಸಲ್ಲಿಸಿದ್ದ ಬಿಡುಗಡೆ ಅರ್ಜಿಯನ್ನು ವಜಾಗೊಳಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಆರೋಪಿ ಸುಶೀಲ್ ಕುಮಾರ್ ಮೂರನೇ ಮದುವೆಯಾಗಿದ್ದು, ಆತನ ಪತ್ನಿ ಆತ್ಮಹತ್ಯೆಗೆ ಶರಣಾಗಲು ಇದೇ ಕಾರಣ ಎಂದು ನ್ಯಾಯಾಲಯ ಹೇಳಿದೆ.
ಮಹಿಳೆಯ ಪತಿ ಮತ್ತೊಬ್ಬ ಮಹಿಳೆಯನ್ನು ರಹಸ್ಯವಾಗಿ ಮದುವೆಯಾಗಿದ್ದರಿಂದ ಆಕೆ ಆತ್ಮಹತ್ಯೆಯ ಹಾದಿ ತುಳಿಯಲು ಕಾರಣವಾಗಿದೆ ಎಂದು ಕೋರ್ಟ್ ತಿಳಿಸಿದೆ. ಯಾವುದೇ ವಿವಾಹಿತ ಮಹಿಳೆಗೆ ತನ್ನ ಪತಿಯನ್ನು ಬೇರೊಬ್ಬ ಮಹಿಳೆ ಹಂಚಿಕೊಳ್ಳುತ್ತಿದ್ದಾರೆ ಅಥವಾ ಅವನು ಬೇರೆ ಮಹಿಳೆಯನ್ನು ಮದುವೆಯಾಗಲಿದ್ದಾನೆ ಎಂದು ತಿಳಿದಾಗ ದೊಡ್ಡ ಆಘಾತವಾಗುತ್ತದೆ. ಅಂತಹ ವಿಚಿತ್ರ ಪರಿಸ್ಥಿತಿಯಲ್ಲಿ, ಅವರಿಂದ ಯಾವುದೇ ವಿವೇಕವನ್ನು ನಿರೀಕ್ಷಿಸುವುದು ಅಸಾಧ್ಯ. ಈ ಪ್ರಕರಣದಲ್ಲಿಯೂ ಅದೇ ಸಂಭವಿಸಿದೆ ಎಂದು ಕೋರ್ಟ್ ಉಲ್ಲೇಖಿಸಿದೆ.
ಮೃತ ಮಹಿಳೆ ತನ್ನ ಪತಿ ಸುಶೀಲ್ ಕುಮಾರ್ ಮತ್ತು ಅವರ ಆರು ಕುಟುಂಬ ಸದಸ್ಯರ ವಿರುದ್ಧ ವಾರಣಾಸಿಯ ಮಂಡುವಾಡಿಹ್ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಅನೇಕ ಸೆಕ್ಷನ್‌ಗಳ ಅಡಿಯಲ್ಲಿ ತ್ವರಿತ ಎಫ್‌ಐಆರ್ ದಾಖಲಿಸಿದ್ದಾರೆ. ಇದು ಸಂಗಾತಿಯ ಜೀವಿತಾವಧಿಯಲ್ಲಿ ಸ್ವಯಂಪ್ರೇರಣೆಯಿಂದ ನೋವುಂಟುಮಾಡುವುದು, ಕ್ರಿಮಿನಲ್ ಬೆದರಿಕೆ ಹಾಗೂ ಮತ್ತೆ ಮದುವೆಯಾಗುವ ಆರೋಪಗಳನ್ನು ಒಳಗೊಂಡಿತ್ತು.
ಎಫ್‌ಐಆರ್‌ನಲ್ಲಿ, ತನ್ನ ಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ, ಆದರೆ, ಅವರು ವಿಚ್ಛೇದನ ಪಡೆಯದೆ ಮೂರನೇ ಬಾರಿಗೆ ಮದುವೆಯಾಗಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ತನ್ನ ಪತಿ ಮತ್ತು ಅವರ ಕುಟುಂಬ ತನ್ನ ಮೇಲೆ ಹಲ್ಲೆ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ನೊಂದ ಮಹಿಳೆ ದೂರು ನೀಡಿದ್ದರು.
ಇನ್ನು, ಎಫ್‌ಐಆರ್ ದಾಖಲಿಸಿದ ಕೂಡಲೇ ಮಹಿಳೆ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ. ಪೊಲೀಸರು ತನಿಖೆ ಆರಂಭಿಸಿದ್ದು, ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದಾರೆ. ಆರೋಪಿಯು ಮೊದಲು ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದ, ಅದನ್ನು ತಿರಸ್ಕರಿಸಲಾಯಿತು. ಹೀಗಾಗಿ ಆತ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಹೇಳಿದ ಹೈಕೋರ್ಟ್, ಮನವಿಯನ್ನು ವಜಾಗೊಳಿಸಿದೆ.