ಸೂರತ್ ನಲ್ಲಿ ಮಂಗಳವಾರ ಬೆಳಿಗ್ಗೆ ಸಿಟಿ ಬಸ್ ಚಾಲಕ ಸಮಯಪ್ರಜ್ಞೆ ಮತ್ತು ಸಕಾಲಿಕವಾಗಿ ಎಚ್ಚರಿಕೆ ವಹಿಸಿದ ಪರಿಣಾಮ ಭಾರೀ ಅಪಘಾತವೊಂದು ತಪ್ಪಿದಂತಾಗಿದೆ.
ಬ್ರೇಕ್ ವೈಫಲ್ಯದಿಂದ ಬಸ್, ಚಾಲಕನ ನಿಯಂತ್ರಣ ತಪ್ಪಿದೆ. ಆ ಸಂದರ್ಭದಲ್ಲಿ ಚಾಲಕ ಚಾಣಾಕ್ಷತನದಿಂದ ಬಸ್ ಅನ್ನು ಹತ್ತಿರದ ಅಂಗಡಿಯೊಂದಕ್ಕೆ ನುಗ್ಗಿಸಿದ್ದಾನೆ. ಇದರ ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಗಿದ್ದಿಷ್ಟು:
ಲಾಲ್ ದರ್ವಾಜ ಮೂಲಕ ಸ್ಟೇಷನ್ ರಸ್ತೆಯತ್ತ ಬಸ್ ಸಾಗುತ್ತಿತ್ತು. ಆ ಸಂದರ್ಭದಲ್ಲಿ ಬಸ್ ನ ಬ್ರೇಕ್ ವೈಫಲ್ಯವಾಗಿದೆ. ಬಸ್ ಅನ್ನು ನಿಲ್ಲಿಸಲು ಹಲವು ಬಾರಿ ಬ್ರೇಕ್ ಒತ್ತಿದರೂ ನಿಲ್ಲದಿರುವುದನ್ನು ಗಮನಿಸಿದ ಚಾಲಕ ಬ್ರೇಕ್ ವೈಫಲ್ಯವಾಗಿರುವುದನ್ನು ಖಚಿತಪಡಿಸಿಕೊಂಡು, ತಡ ಮಾಡದೇ, ಯಾರೂ ಇರುವುದನ್ನು ನೋಡಿಕೊಂಡು ಹತ್ತಿರದಲ್ಲಿದ್ದ ಅಂಗಡಿಯೊಂದಕ್ಕೆ ಬಸ್ ಅನ್ನು ಚಲಾಯಿಸಿದ್ದಾನೆ.
ಈ ಸಮಯಪ್ರಜ್ಞೆಯ ಬಸ್ ಚಾಲನೆ ಮತ್ತು ಅಂಗಡಿಯೊಳಕ್ಕೆ ಬಸ್ ನುಗ್ಗಿದ ದೃಶ್ಯಾವಳಿಗಳು ಖಾಸಗಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದ್ದು, ಚಾಲಕನ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.