ಸಾಮಾನ್ಯವಾಗಿ ರೈಲುಗಳ ಸಂಚಾರ ಒತ್ತಡದಿಂದ ಹೊರಡುವುದು ಅಥವಾ ತಲುಪುವುದು ಗಂಟೆಗಟ್ಟಲೆ ತಡವಾಗುತ್ತದೆ. ಆದರೆ, ಬಿಹಾರದಲ್ಲೊಂದು ವಿಲಕ್ಷಣ ಘಟನೆ ನಡೆದಿದೆ.
ಸೋಮವಾರ ರೈಲು ಹೊರಡುವ ಸಮಯಕ್ಕೆ ಸರಿಯಾಗಿ ರೈಲು ಚಲಾಯಿಸುವ ಲೋಕೋ ಪೈಲಟ್ ಸುಮಾರು ಒಂದು ಗಂಟೆ ಕಾಲ ನಾಪತ್ತೆಯಾಗಿದ್ದರು.
ಏಕೆ ಹೀಗೆ ? ಎಂಬುದು ನಿಮ್ಮಲ್ಲಿ ಪ್ರಶ್ನೆಗಳು ಹುಟ್ಟಿಕೊಂಡು ಹಲವಾರು ಅನುಮಾನಗಳು ಬರುವುದು ಸಹಜ. ಆದರೆ, ಈ ಅನುಮಾನಗಳಲ್ಲಿ ಒಂದು ನಿಜವೆಂದೇ ಭಾವಿಸಿಕೊಳ್ಳಿ.
ಏನೆಂದರೆ, ಲೋಕೋಪೈಲಟ್ ರೈಲನ್ನು ನಿಲ್ಲಿಸಿ `ಗುಂಡು’ ಹಾಕಲು ಹೋಗಿದ್ದನಂತೆ….!!! ಅಂತೂ ಇಂತೂ ರೈಲ್ವೆ ಪೊಲೀಸರು ಹುಡುಕಿ ಹುಡುಕಿ ಸಾಕಾಗಿದ್ದಾರೆ. ಒಂದು ಗಂಟೆ ತರುವಾಯ ಲೋಕೋಪೈಲಟ್ ತೂರಾಡುತ್ತಾ ರೈಲನ್ನು ತಲುಪಿದ್ದಾನೆ ಎಂದು ವರದಿಯಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಮಸ್ತಿಪುರ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಲೋಕ್ ಅಗರ್ವಾಲ್, ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜಧಾನಿ ಎಕ್ಸ್ ಪ್ರೆಸ್ ರೈಲಿಗೆ ಮಾರ್ಗ ಬಿಟ್ಟು ಕೊಡಬೇಕಾಗಿದ್ದ ಹಿನ್ನೆಲೆಯಲ್ಲಿ ಹಸನ್ಪುರ ತಲುಪಲು ಸುಮಾರು 45 ಕಿಲೋಮೀಟರ್ ದೂರದಲ್ಲಿ ರೈಲನ್ನು ನಿಲ್ಲಿಸಲಾಯಿತು. ಸಾಮಾನ್ಯವಾಗಿ ಈ ಜಾಗದಲ್ಲಿ ಗರಿಷ್ಠವೆಂದರೆ 2 ನಿಮಿಷ ನಿಲುಗಡೆ ಇತ್ತು.
ಆದರೆ, ರೈಲನ್ನು ನಿಲ್ಲಿಸಿದ್ದೇ ತಡ ಲೋಕೋ ಪೈಲಟ್ ಕರ್ಮವೀರ್ ಪ್ರಸಾದ್ ಯಾದವ್, ಇಳಿದು ಹತ್ತಿರದಲ್ಲೇ ಇದ್ದ ಮದ್ಯದಂಗಡಿಗೆ ಹೋಗಿ ಮದ್ಯಸೇವನೆ ಮಾಡಿದ್ದಾನೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.