ಬೆಂಗಳೂರು: ಪಿಎಸ್ಐ ಹುದ್ದೆ ಅಕ್ರಮದಲ್ಲಿ ಪ್ರಭಾವಿ ಮಂತ್ರಿಗಳೊಬ್ಬರ ಹೆಸರು ಕೇಳಿಬಂದಿದ್ದು, ಮಂತ್ರಿಯ ತಮ್ಮ ಅಭ್ಯರ್ಥಿಯಿಂದ 80 ಲಕ್ಷ ರೂ ಹಣ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ,.ಶಿವಕುಮಾರ್, ಅಕ್ರಮದಲ್ಲಿ ಸಿಎಂ ರೇಸ್ ನಲ್ಲಿರುವ ಸಚಿವರೊಬ್ಬರ ಹೆಸರು ಕೇಳಿಬಂದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಪ್ರಕರಣದಲ್ಲಿ ಪ್ರಭಾವಿ ಸಚಿವರೊಬ್ಬರ ಹೆಸರು ಕೇಳಿಬಂದಿದೆ. ಆ ಮಂತ್ರಿ ಅಥವಾ ಅವರ ತಮ್ಮ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ನಾನು ಹೇಳಲ್ಲ. ಅವರ ಸಂಬಂಧಿಕರು ಭಾಗಿಯಾಗಿದ್ದಾರೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಆ ಸಚಿವರು ಸಿಎಂ ರೇಸ್ ನಲ್ಲಿದ್ದಾರೆ. ಅವರು ಸಿಎಂ ರೇಸ್ ನಲ್ಲಿರುವುದರಿಂದ ಅವರ ಹೆಸರನ್ನು ಬಹಿರಂಗವಾಗಿ ಹೇಳದಂತೆ ಕೆಲವರು ನನ್ನಬಳಿ ಮಾತನಾಡಿದ್ದಾರೆ. ಆದರೆ ಆ ಸಚಿವರು ಸಿಐಡಿ ತನಿಖೆಗೆ ಮುಂದಾದಾಗ ಸ್ವತಃ ಕರೆ ಮಾಡಿ ತನಿಖೆ ನಡೆಸದಂತೆ ಅಧಿಕಾರಿಗಳಿಗೆ ತಡೆ ನೀಡಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬದ್ಧತೆ ಇದ್ದರೆ ಪ್ರಕರಣದ ಸಂಪೂರ್ಣ ತನಿಖೆಗೆ ಆದೇಶ ನೀಡಲಿ ಎಂದು ಆಗ್ರಹಿಸಿದರು.
ಇದು ಸಿಎಂ ಬಸವರಾಜ್ ಬೊಮ್ಮಾಯಿ ಕಾಲದಲ್ಲಾದ ಅಕ್ರಮವಲ್ಲ, ಅಥವಾ ಸಿಎಂ ಬೊಮ್ಮಾಯಿ ಅವರು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ. ಪ್ರಕರಣದಲ್ಲಿ ಭಾಗಿಯಾದ ಅಭ್ಯರ್ಥಿಗಳ ಪೋಸ್ಟಿಂಗ್ ಕೂಡ ಆಗಿದೆ. ಮಾಹಿತಿ ಪ್ರಕಾರ ಮಾಗಡಿಯ ಮೂವರು ಅಭ್ಯರ್ಥಿಗಳು ಇದ್ದಾರೆ. ಪೋಸ್ಟಿಂಗ್ ಆದ ಅಭ್ಯರ್ಥಿಗಳನ್ನು ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆಯೇ ? ಯಾಕೆ ನಡೆಸುತ್ತಿಲ್ಲ ? ಎಂದು ಪ್ರೆಶ್ನಿಸಿದ್ದಾರೆ.
ರಾಮನಗರದ ಉಸ್ತುವಾರಿ ಸಚಿವರು ನಮಗೆ ಗಂಡಸ್ತನದ ಮಾತನಾಡಿದರು. ಸಿಎಂ ಬೊಮ್ಮಾಯಿ ಎದುರಿಗೆ ಇಂತಹ ಮಾತುಗಳನ್ನು ಆಡಿದರು. ನಾವ್ಯಾರು ಗಂಡಸರಲ್ಲ, ಆ ಸಚಿವರೊಬ್ಬರೇ ಗಂಡಸರು. ನಾನು, ನನ್ನ ತಮ್ಮ, ಅನಿತಾ ಕುಮಾರಸ್ವಾಮಿಯವರು ರಾಮನಗರದಲ್ಲಿ ಅವರ ಗಂಡಸ್ತನ ನೋಡಿ ಗಡ ಗಡ ನಡುಗುತ್ತಿದ್ದೇವೆ. ತಾಕತ್ತಿರುವ ಸಚಿವರು ಪಿಎಸ್ಐ ಅಕ್ರಮ ತನಿಖೆ ವಿಚಾರದಲ್ಲಿ ತಾಕತ್ ತೋರಿಸಲಿ ಎಂದು ಸಚಿವ ಅಶ್ವತ್ಥನಾರಾಯಣ ಹೆಸರು ಹೇಳದೆಯೇ ಸವಾಲು ಹಾಕಿದರು.
ರಾಜ್ಯ ಸರ್ಕಾರಕ್ಕೆ ಕಿಂಚಿತ್ತಾದರೂ ಬದ್ಧತೆ ಇದ್ದರೆ ಪಿಎಸ್ಐ ನೇಮಕಾತಿ ಅಕ್ರಮದ ಪ್ರಕರಣದಲ್ಲಿ ಯಾರೇ ಭಾಗಿಯಾಗಿರಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.