ಲಾಸ್ ವೇಗಾಸ್: ಬಣ್ಣ ಬದಲಿಸುವ ಗೋಸುಂಬೆ ಬಗ್ಗೆ ಕೇಳಿರ್ತೀರಾ…… ಆದರೆ, ಬಣ್ಣ ಬದಲಿಸುವ ಕಾರಿನ ಬಗ್ಗೆ ಎಂದಾದ್ರೂ ಕೇಳಿದ್ದೀರಾ..? ಖಂಡಿತಾ ಇಲ್ಲ ಅಲ್ವಾ..?
ಇದೀಗ, ಜರ್ಮನ್ ಐಷಾರಾಮಿ ಕಾರು ತಯಾರಕ ಬಿಎಂಡಬ್ಲ್ಯು ತನ್ನ ಮುಂಬರಲಿರುವ ಹೊಸ ಮಾದರಿಯಲ್ಲಿ ಬಣ್ಣ ಬದಲಾಯಿಸುವ ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ. ಹೌದು, ಮುಂಬರಲಿರುವ ಕೆಲವು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಇದು ಅನಾವರಣಗೊಳಿಸಿದೆ. ಅದು ತನ್ನ ಗ್ರಾಹಕರಿಗೆ ಅಸಾಧಾರಣ ಸವಾರಿ ಅನುಭವವನ್ನು ನೀಡುವುದಲ್ಲದೆ ಬಣ್ಣವನ್ನು ಬದಲಾಯಿಸಬಹುದು.
ಬಿಎಂಡಬ್ಲ್ಯೂ ಐಎಕ್ಸ್ ಫ್ಲೋ ಎಂದು ಹೆಸರಿಸಲಾದ ಈ ಕಾರು ಪ್ರಪಂಚದ ಮೊದಲ ಬಣ್ಣ-ಬದಲಾಯಿಸುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದು ಸಾಮಾನ್ಯವಾಗಿ ಇ-ರೀಡರ್‌ಗಳಲ್ಲಿ ಕಂಡುಬರುವ ಎಲೆಕ್ಟ್ರಾನಿಕ್ ಇಂಕ್ ತಂತ್ರಜ್ಞಾನವನ್ನು ಬಳಸುತ್ತದೆ. ಕಾರಿನ ಹೊರಭಾಗವನ್ನು ಬೂದು ಮತ್ತು ಬಿಳಿಯ ಮಾದರಿಗಳ ರೂಪಾಂತರಕ್ಕೆ ಪರಿವರ್ತಿಸುತ್ತದೆ.
ಐಷಾರಾಮಿ ಕಾರು ತಯಾರಕರು ಲಾಸ್ ವೇಗಾಸ್‌ನಲ್ಲಿನ ಗ್ರಾಹಕ ಎಲೆಕ್ಟ್ರಾನಿಕ್ಸ್ ಶೋ ನಲ್ಲಿ ಈ ಪರಿಕಲ್ಪನೆಯ ಕಾರನ್ನು ಅನಾವರಣಗೊಳಿಸಿದ್ದಾರೆ. ಬಿಎಂಡಬ್ಲ್ಯು ಪ್ರದರ್ಶಿಸಿದ ಕಾರು ಬೂದು ಮತ್ತು ಬಿಳಿ ನಡುವೆ ಮಾತ್ರ ಬದಲಾಗಬಹುದು. ಆದರೆ, ತಂತ್ರಜ್ಞಾನದಲ್ಲಿ ಬಣ್ಣಗಳ ವರ್ಣಪಟಲವನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಕಂಪನಿ ಹೇಳಿದೆ.
ಕಾರಿನ ಬಣ್ಣ ಹೇಗೆ ಬದಲಾಗುತ್ತದೆ ?
ಫೋನ್ ಅಪ್ಲಿಕೇಶನ್ ಮೂಲಕ ಗ್ರಾಹಕರು ತಮ್ಮ ಐಷಾರಾಮಿ ಕಾರಿನ ಹೊರಭಾಗದ ಬಣ್ಣವನ್ನು ಬದಲಾಯಿಸಲು ಸಾಧ್ಯವಾಗುತ್ತದೆ. ಫೋನ್ ಅಪ್ಲಿಕೇಶನ್‌ನಿಂದ ನಿಯಂತ್ರಿಸಲ್ಪಡುವ ಎಲೆಕ್ಟ್ರಿಕಲ್ ಸಿಗ್ನಲ್‌ಗಳಿಂದ ಪ್ರಚೋದಿಸಿದಾಗ, ಕಾರಿನ ದೇಹದ ವಸ್ತುವು ಮೇಲ್ಮೈಗೆ ವಿಭಿನ್ನ ವರ್ಣದ್ರವ್ಯಗಳನ್ನು ತರುತ್ತದೆ. ಇದರಿಂದಾಗಿ ವಿಭಿನ್ನ ಛಾಯೆ ಅಥವಾ ವಿನ್ಯಾಸವನ್ನು ಕಾರು ಪಡೆದುಕೊಳ್ಳುತ್ತದೆ.