ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಭಾರತ ಕಾರಣ ಕಾಂಗ್ರೆಸ್ ಜೊತೆ ಜೆಡಿಎಸ್ ಕೈಜೋಡಿಸಿದ್ದು ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೆ ಆನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಕೆಲ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತ್ತು.
ಇದರಿಂದಾಗಿ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್-ಜೆಡಿಎಸ್ ಶಾಸಕರುಗಳು ಬಳಿಕ ಬಿಜೆಪಿ ಸೇರ್ಪಡೆಗೊಂಡು ಬಹುತೇಕರು ಉಪಚುನಾವಣೆಯಲ್ಲಿ ಮರು ಆಯ್ಕೆಯಾಗಿದ್ದರು. ಒಂದಿಬ್ಬರನ್ನು ಹೊರತುಪಡಿಸಿ ಬಿಜೆಪಿ ಸೇರ್ಪಡೆಗೊಂಡಿದ್ದ ಅನ್ಯ ಪಕ್ಷದ ಶಾಸಕರುಗಳಿಗೆ ಮಂತ್ರಿಗಳನ್ನಾಗಿ ಮಾಡಲಾಗಿತ್ತು.
ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಬಿಜೆಪಿ ಸೇರ್ಪಡೆಗೊಂಡಿದ್ದ ಬಹುತೇಕರಿಗೆ ಆ ಪಕ್ಷದಲ್ಲಿ ಇನ್ನೂ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಮಧ್ಯೆ ಸಚಿವ ಎಂ ಟಿ ಬಿ ನಾಗರಾಜ್ ಅವರು ನೀಡಿರುವ ಹೇಳಿಕೆಯೊಂದು ಈ ಮಾತಿಗೆ ಪುಷ್ಟಿ ನೀಡುವಂತಿದೆ.
ಶುಕ್ರವಾರ ರಾತ್ರಿ ಬಾಗೇಪಲ್ಲಿ ಪುರಸಭಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಧಿಕಾರಿಗಳ ಹಾಗೂ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ನನಗೆ ಹಣ ಮಾಡಬೇಕು ಎಂಬ ಪರಿಸ್ಥಿತಿ ಇಲ್ಲ. ಹಾಗಾಗಿ ಈಗಲೂ ಆ ವಿಷಯದಲ್ಲಿ ಪರಿಶುದ್ಧನಾಗಿದ್ದೇನೆ. ಆದರೆ ನಾನು ಮಾಡಿದ ಮೊದಲ ತಪ್ಪು ಎಂದರೆ ಒಂದು ಪಕ್ಷ ತೊರೆದು ಮತ್ತೊಂದು ಪಕ್ಷ ಸೇರಿರುವುದು. ಅದರ ಅರಿವು ಈಗ ನನಗಾಗುತ್ತಿದೆ ಎಂದು ಪಶ್ಚಾತ್ತಾಪಪಟ್ಟಿದ್ದಾರೆ.