ಕೋವಿಡ್—19ನಿಂದ ಭಾರತದ ಆರ್ಥಿಕತೆ ಸಂಪೂರ್ಣ ಹದಗೆಟ್ಟಿರೋದು ಎಲ್ಲರಿಗೂ ತಿಳಿದಿರೋ ವಿಚಾರ. ಆದ್ರೆ ಕೊರೊನಾ ಪೆಂಡಮಿಕ್‌ನಿಂದ ಉಂಟಾದ ನಷ್ಟವನ್ನು ಭರಿಸಲು ಭಾರತದ ಆರ್ಥಿಕತೆಗೆ ಬರೋಬ್ಬರಿ 15 ವರ್ಷಗಳೇ ಬೇಕು ಎಂಬ ಆಘಾತಕಾರಿ ಅಂಶವೀಗ ಬಹಿರಂಗವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ 2021-22ರ ಕರೆನ್ಸಿ ಮತ್ತು ಹಣಕಾಸು (ಆರ್‌ಸಿಎಫ್) ವರದಿಯಲ್ಲಿ ಈ ಅಂಶವನ್ನು ಬಹಿರಂಗಪಡಿಸಿದೆ.
ಆರ್‌ಬಿಐ ವರದಿಯಲ್ಲಿ ಭಾರತದ ಆರ್ಥಿಕತೆಯ ಕಠೋರ ಚಿತ್ರಣವೇ ಇದೆ. ‘ಪುನರುಜ್ಜೀವನ ಮತ್ತು ಪುನರ್‌ನಿರ್ಮಾಣ’ ಎಂಬ ವಿಷಯದ ಕುರಿತಾದ ವರದಿ ಇದು. ಕೋವಿಡ್ ನಂತರ ಆರ್ಥಿಕತೆಯ ಚೇತರಿಕೆ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿದೆ.
RBI ಪ್ರಕಾರ, ದೇಶವು ಈಗ ಆರ್ಥಿಕ ಪ್ರಗತಿಯ ಏಳು ಚಕ್ರಗಳ ಮೇಲೆ ಕೇಂದ್ರೀಕರಿಸಬೇಕಾಗಿದೆ. ಅವು ಯಾವುವೆಂದರೆ ಒಟ್ಟು ಬೇಡಿಕೆ, ಒಟ್ಟು ಪೂರೈಕೆ, ಸಂಸ್ಥೆಗಳು, ಮಧ್ಯವರ್ತಿಗಳು ಮತ್ತು ಮಾರುಕಟ್ಟೆಗಳು, ಸ್ಥೂಲ ಆರ್ಥಿಕ ಸ್ಥಿರತೆ ಮತ್ತು ನೀತಿ ಸಮನ್ವಯ, ಉತ್ಪಾದಕತೆ ಮತ್ತು ತಾಂತ್ರಿಕ ಪ್ರಗತಿ, ರಚನಾತ್ಮಕ ಬದಲಾವಣೆಗಳು ಮತ್ತು ಸುಸ್ಥಿರತೆ.
ದೇಶವು ಬಲವಾದ ಮತ್ತು ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ಸಾಗಲು ಬೆಲೆಗಳ ಸ್ಥಿರತೆ ಅಗತ್ಯ ಎಂದು ವರದಿಯಲ್ಲಿ RBI ಅಭಿಪ್ರಾಯಪಟ್ಟಿದೆ. ಮುಂದಿನ ಐದು ವರ್ಷಗಳಲ್ಲಿ ಸಾಮಾನ್ಯ ಸರ್ಕಾರಿ ಸಾಲವನ್ನು ಜಿಡಿಪಿಯ ಶೇ.66 ಕ್ಕಿಂತ ಕಡಿಮೆ ಮಾಡುವುದು ಭಾರತದ ಮಧ್ಯಮ-ಅವಧಿಯ ಬೆಳವಣಿಗೆಯ ನಿರೀಕ್ಷೆಗಳನ್ನು ಭದ್ರಪಡಿಸಿಕೊಳ್ಳಲು ಬಹು ಮುಖ್ಯವಾಗಿದೆ.
ವರದಿಯ ಮುನ್ನುಡಿ ಬರೆದಿರೋ RBI ಗವರ್ನರ್ ಶಕ್ತಿಕಾಂತ್ ದಾಸ್, “ಆರ್ಥಿಕತೆಯನ್ನು ಸ್ಥಿರಗೊಳಿಸುವುದು ಮತ್ತು ಅದರ ಮೊದಲ ಅಲೆಯ ಪಥಕ್ಕೆ ಮರಳುವುದು ಮಾತ್ರ ತೃಪ್ತಿಕರವಾಗಿರುವುದಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ದಾಸ್ ಅವರ ಪ್ರಕಾರ ಉದ್ಯಮಿಗಳು, ವ್ಯವಹಾರಗಳು ಮತ್ತು ಹಣಕಾಸಿನ ಪ್ರಾಧಿಕಾರಕ್ಕೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು ಅವಶ್ಯಕ.
2019-2020ರಲ್ಲಿ ಶೇ.6.6ರಷ್ಟಿದ್ದ ಬೆಳವಣಿಗೆ ದರ 2020-21ರಲ್ಲಿ 8.9ರಷ್ಟಾಗಿತ್ತು. 2022-23ರಲ್ಲಿ 7.2ರಷ್ಟಾಗುವ ನಿರೀಕ್ಷೆ ಇದೆ. ಇದನ್ನೆಲ್ಲ ಗಮನಿಸಿದ್ರೆ ಭಾರತ ಕೋವಿಡ್‌ನಿಂದಾದ ನಷ್ಟದಿಂದ ಹೊರಬರುವುದು 2034-35ರಲ್ಲಿ ಅಂತ RBI ಹೇಳಿದೆ.
2024ರಲ್ಲಿ ಬೆಳವಣಿಗೆ ದರ 6.4ರಷ್ಟಿರಲಿದೆ ಅನ್ನೋದು RBI ಲೆಕ್ಕಾಚಾರ. ಇಂಟರ್‌ನ್ಯಾಶನಲ್ ಮೊನಿಟರಿ ಫಂಡ್ಸ್‌ನ ಇತ್ತೀಚಿನ ವರದಿ ಪ್ರಕಾರ 2023-24ರಲ್ಲಿ ಬೆಳವಣಿಗೆ ದರ 6.9ರಷ್ಟಿರಲಿದೆಯಂತೆ. 2021ರಲ್ಲಿ ಭಾರತಕ್ಕಾದ ನಷ್ಟ 19.1ಲಕ್ಷ ಕೋಟಿ ರೂಪಾಯಿ. 2022ರಲ್ಲಿ 17.1 ಲಕ್ಷ ಕೋಟಿ ರೂಪಾಯಿ ನಷ್ಟವನ್ನು ಭಾರತ ಅನುಭವಿಸಿದೆ. 2023ರಲ್ಲಿ 16.4 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆ ಎಂದು ಅಂದಾಜಿಸಲಾಗಿದೆ. FY22 ರಲ್ಲಿ ಭಾರತದ ನೈಜ GDP 147.54 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
ಶಿಕ್ಷಣ ಮತ್ತು ಆರೋಗ್ಯದ ಮೇಲಿನ ಸಾರ್ವಜನಿಕ ವೆಚ್ಚ ಕಡಿತ, ಸ್ಕಿಲ್ ಇಂಡಿಯಾ ಮಿಷನ್ ಮೂಲಕ ಕಾರ್ಮಿಕರ ಗುಣಮಟ್ಟವನ್ನು ಹೆಚ್ಚಿಸುವುದು, ನಾವೀನ್ಯತೆ ಮತ್ತು ತಂತ್ರಜ್ಞಾನಕ್ಕೆ ಒತ್ತು ನೀಡುವ ಮೂಲಕ ಆರ್ & ಡಿ ಚಟುವಟಿಕೆಗಳನ್ನು ಹೆಚ್ಚಿಸುವುದು, ಸ್ಟಾರ್ಟಪ್‌ಗಳು ಮತ್ತು ಯುನಿಕಾರ್ನ್‌ಗಳಿಗೆ ಸಕ್ರಿಯ ವಾತಾವರಣವನ್ನು ಸೃಷ್ಟಿಸುವುದು, ಅಸಮರ್ಥತೆಯನ್ನು ಉತ್ತೇಜಿಸುವ ಸಬ್ಸಿಡಿಗಳನ್ನು ತರ್ಕಬದ್ಧಗೊಳಿಸುವಿಕೆ, ವಸತಿ ಮತ್ತು ಭೌತಿಕ ಮೂಲಸೌಕರ್ಯವನ್ನು ಸುಧಾರಣೆ ಹೀಗೆ ಆರ್ಥಿಕತೆ ಚೇತರಿಕೆಗೆ ಸಾಕಷ್ಟು ರಚನಾತ್ಮಕ ಕ್ರಮಗಳನ್ನೂ RBI ಪ್ರಸ್ತಾಪಿಸಿದೆ.