ಭಾರೀ ಸಂಖ್ಯೆಗಳಲ್ಲಿ ಉದ್ಯೋಗಿಗಳು ಐಟಿ ಕಂಪನಿಗಳನ್ನು ತೊರೆಯುತ್ತಿರೋದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದಿದೆ. ಇದರ ನೇರ ಪರಿಣಾಮ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮತ್ತು ಇನ್ಫೋಸಿಸ್ ಮೇಲಾಗಿದೆ. ಐಟಿ ಸಂಸ್ಥೆಗಳಲ್ಲೀಗ ಸೀಮಿತ ಪ್ರತಿಭೆಗಳಿದ್ದು, ಉದ್ಯೋಗಿಗಳ ನೇಮಕಾತಿಗಾಗಿ ಪೈಪೋಟಿಗೆ ಬಿದ್ದಿವೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ TCS 40,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಯೋಜನೆ ಹಾಕಿಕೊಂಡಿದೆ. ಇನ್ಫೋಸಿಸ್ 50,000ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಇದಕ್ಕೆ ಕಾರಣ ಕಂಪನಿಯ ಅಟ್ರಿಷನ್ ದರದಲ್ಲಾಗ್ತಿರೋ ಏರುಪೇರು ಅಂತ ಹೇಳಲಾಗ್ತಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಅಟ್ರಿಷನ್ ಶೇಕಡಾವಾರು ಮತ್ತು ಸಂಪೂರ್ಣ ಹೆಡ್‌ಕೌಂಟ್ ಎರಡರಲ್ಲೂ 5 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಇನ್ಫೋಸಿಸ್‌ನ ಮುಖ್ಯ ಹಣಕಾಸು ಅಧಿಕಾರಿ ನಿಲಂಜನ್ ರಾಯ್ ಅಭಿಪ್ರಾಯಪಟ್ಟಿದ್ದಾರೆ.
ಟಿಸಿಎಸ್ ಹಾಗೂ ಇನ್ಫೋಸಿಸ್ ಎರಡೂ ಕಂಪನಿಗಳು ಹೊಸ ಮುಖಗಳಿಗೆ ಮಣೆ ಹಾಕ್ತಾ ಇವೆ. 2021ರಲ್ಲಿ ಕ್ಯಾಂಪಸ್ ನೇಮಕಾತಿ ಮೂಲಕ 61,000 ಫ್ರೆಶರ್‌ಗಳಿವೆ ಅವಕಾಶ ಕೊಟ್ಟಿವೆ. 2022ರಲ್ಲಿ TCS 1 ಲಕ್ಷ ಫ್ರೆಶರ್‌ಗಳನ್ನು ನೇಮಕ ಮಾಡಿಕೊಂಡಿದ್ದು, ಇನ್ಫೋಸಿಸ್ 80 ಸಾವಿರ ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಿದೆ. 2023ನೇ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ 50,000 ಕ್ಕೂ ಹೆಚ್ಚು ಹೊಸಬರನ್ನು ನೇಮಿಸಿಕೊಳ್ಳಲು ಯೋಜಿಸಿದೆ.
ಈ ತಿಂಗಳ ಆರಂಭದಲ್ಲಿ ಕಂಪನಿಯ ಫಲಿತಾಂಶವನ್ನು ಪ್ರಕಟಿಸುವ ವೇಳೆ ಮಾತನಾಡಿದ ಇನ್ಫೋಸಿಸ್‌ನ ಮುಖ್ಯ ಹಣಕಾಸು ಅಧಿಕಾರಿ ನಿಲಂಜನ್ ರಾಯ್, “ಕಳೆದ ವರ್ಷ ನಾವು ಭಾರತದಾದ್ಯಂತ ಮತ್ತು ಜಾಗತಿಕವಾಗಿ 85,000 ಫ್ರೆಶರ್‌ಗಳನ್ನು ನೇಮಿಸಿಕೊಂಡಿದ್ದೇವೆ. ನಾವು ಕನಿಷ್ಟ 50,000 ಉದ್ಯೋಗಿಗಳನ್ನು ಈ ವರ್ಷ ನೇಮಿಸಿಕೊಳ್ಳಲು ಯೋಜಿಸುತ್ತಿದ್ದೇವೆ. ಇದರ ಸಾಧಕ ಬಾಧಕಗಳನ್ನು ಮುಂದೆ ಪರಿಶೀಲಿಸಲಾಗುತ್ತದೆ ಎಂದಿದ್ದರು.
ಅದೇ ರೀತಿ ಟಿಸಿಎಸ್ ಕೂಡ ನೇಮಕಾತಿ ಕಳೆದ ಆರ್ಥಿಕ ವರ್ಷದಂತೆಯೇ ಇರುತ್ತದೆ ಎಂದು ಹೇಳಿದೆ. ಕಂಪನಿಯು 40,000 ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವ ಗುರಿ ಹೊಂದಿದ್ದು, ಅದನ್ನು ತ್ವರಿತಗೊಳಿಸಲಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ NG ಸುಬ್ರಮಣ್ಯಂ ಹೇಳಿದ್ದಾರೆ. ಐಟಿ ಕಂಪನಿಗಳಲ್ಲಿ ಸದ್ಯಕ್ಕಂತೂ ವರ್ಕ್ ಫ್ರಮ್ ಹೋಮ್ ಮುಂದುವರಿಯುವ ಸಾಧ್ಯತೆ ಇದೆ.
ಟಿಸಿಎಸ್ ’25X25′ ಮಾದರಿಯನ್ನು ಅಳವಡಿಸಿಕೊಳ್ಳಲು ಮತ್ತು ಹಾಟ್ ಡೆಸ್ಕ್‌ಗಳನ್ನು ಪರಿಚಯಿಸಲು ನಿರ್ಧರಿಸಿದೆ. 25X25 ಮಾದರಿ ಮೂಲಕ ಮತ್ತೆ ಉದ್ಯೋಗಿಗಳನ್ನು ಕಚೇರಿಗೆ ಕರೆಸುವ ಯೋಜನೆಯಿದೆ. ಕ್ರಮೇಣ ಹೈಬ್ರಿಡ್ ಕೆಲಸದ ಮಾದರಿಗೆ ಇದು ಪರಿವರ್ತನೆಗೊಳ್ಳುತ್ತದೆ. ಈ ಮಾದರಿಯ ಪ್ರಕಾರ 2025ರ ವೇಳೆಗೆ, ಕಂಪನಿಯ ಶೇಕಡಾ 25 ಕ್ಕಿಂತ ಹೆಚ್ಚು ಉದ್ಯೋಗಿಗಳು ಯಾವುದೇ ನಿರ್ದಿಷ್ಟ ಹಂತದಲ್ಲಿ ಕಚೇರಿಯಿಂದ ಕೆಲಸ ಮಾಡಬೇಕಾಗಿಲ್ಲ ಮತ್ತು ಕಚೇರಿಯಲ್ಲಿ 25 ಪ್ರತಿಶತಕ್ಕಿಂತ ಹೆಚ್ಚು ಸಮಯವನ್ನು ಕಳೆಯಬೇಕಾಗಿಲ್ಲ.
ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮ ಕಂಪನಿಯ ಪ್ರಮುಖ ಆದ್ಯತೆಯಾಗಿರೋದ್ರಿಂದ ಹೈಬ್ರಿಡ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುವುದಾಗಿ HCL ಹೇಳಿದೆ. ಇನ್ಫೋಸಿಸ್ ಹಂತಹಂತವಾಗಿ ಉದ್ಯೋಗಿಗಳನ್ನು ಕಚೇರಿಗೆ ಕರೆಸಿಕೊಳ್ಳಲು ಯೋಜನೆ ಹಾಕಿಕೊಂಡಿದೆ. ದೀರ್ಘಾವಧಿಗೆ ಹೈಬ್ರಿಡ್ ಮಾದರಿಯನ್ನೇ ಅಳವಡಿಸಿಕೊಳ್ಳಲು ಚಿಂತನೆ ನಡೆಸಿರೋದಾಗಿ ಹೇಳಿದೆ.