ಮದುವೆ ಎಂಬುದು ಜೀವನದ ಒಂದು ಪ್ರಮುಖ ಘಟ್ಟ. ವಧು-ವರರ ಮನೆಯಲ್ಲಿ ಹಬ್ಬ, ಸಡಗರವನ್ನು ಉಂಟು ಮಾಡುವ ಸಂದರ್ಭ ಅದು. ಪೋಷಕರು ತಮ್ಮ ಮಗಳಿಗೆ ಉತ್ತಮ ವರ ಸಿಗಬೇಕೆಂದು ಬಯಸುತ್ತಾರೆ. ಅದೇ ರೀತಿ ವರನ ಪೋಷಕರು ತಮಗೊಬ್ಬ ಉತ್ತಮ ಸೊಸೆ ಬರಬೇಕೆಂದು ಬಯಸುತ್ತಾರೆ.
ಆದರೆ, ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯಲ್ಲೊಬ್ಬ ʼಗುಂಡು’ ಪಾರ್ಟಿ ಮದುವೆ ದಿನವೂ ಕಂಠಪೂರ್ತಿ ಕುಡಿದು ಮದುವೆ ಮಂಟಪಕ್ಕೆ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ವಧುವಿನ ಪೋಷಕರು ತಬ್ಬಿಬ್ಬುಗೊಂಡರೂ ಮದುವೆಗೆಂದು ಬಂದಿದ್ದ ಸಂಬಂಧಿಕರೊಬ್ಬರ ಯುವಕನಿಗೆ ತಮ್ಮ ಮಗಳನ್ನು ಧಾರೆ ಎರೆದುಕೊಟ್ಟಿದ್ದಾರೆ.
ಮದುವೆ ಮಂಟಪದಲ್ಲಿ ಆಗಿದ್ದಿಷ್ಟು:- ಬುಲ್ಧಾನ ಜಿಲ್ಲೆಯ ಮಲ್ಕಾಪುರ ಪಾಂಗ್ರ ಗ್ರಾಮದಲ್ಲಿ ಏಪ್ರಿಲ್ 22 ರಂದು ಸಂಜೆ 4 ಗಂಟೆಗೆ ಮದುವೆ ನಿಗದಿಯಾಗಿತ್ತು. ಆ ಶುಭ ಸಂದರ್ಭಕ್ಕೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದರು ಮತ್ತು ಮದುವೆ ಗಂಡಿನ ಆಗಮನಕ್ಕಾಗಿ ಎದುರು ನೋಡುತ್ತಿದ್ದರು.
ಆದರೆ, ರಾತ್ರಿ 8 ಗಂಟೆಯಾದರೂ ಮದುವೆ ಗಂಡು ನಾಪತ್ತೆ. ಗಂಡು ತನ್ನ ಸ್ನೇಹಿತರೊಂದಿಗೆ ಸೇರಿ ಗುಂಡಿನ ಪಾರ್ಟಿ ಮಾಡುತ್ತಾ ಕುಣಿದು ಕುಪ್ಪಳಿಸುತ್ತಿದ್ದನಂತೆ.
ಪಾನಮತ್ತನಾಗಿ ಸ್ನೇಹಿತರೊಂದಿಗೆ ಸಂಜೆ 4 ಗಂಟೆಯ ಬದಲಾಗಿ ರಾತ್ರಿ 8 ಗಂಟೆ ಸುಮಾರಿಗೆ ಬಂದ ವರನು ವಧುವಿನ ಪೋಷಕರೊಂದಿಗೆ ಜಗಳಕ್ಕಿಳಿದಿದ್ದಾನೆ.
ಭಾವಿ ಅಳಿಯನ ಪರಿಸ್ಥಿತಿಯನ್ನು ಕಂಡ ವಧುವಿನ ತಂದೆ ಮದುವೆಗೆಂದು ಆಗಮಿಸಿದ್ದ ಸಂಬಂಧಿಕರೊಂದಿಗೆ ಮಾತುಕತೆ ನಡೆಸಿ ಅವರ ಮಗನಿಗೆ ಮಗಳನ್ನು ಧಾರೆ ಎರೆದುಕೊಟ್ಟಿದ್ದಾರೆ.