ವ್ಯಕ್ತಿಯೊಬ್ಬರು ಇ-ಬೇನಲ್ಲಿ ಖರೀದಿಸಿದ ಸೆಕೆಂಡ್ ಹ್ಯಾಂಡ್ ಕಿಚನ್ ಸೆಟ್ ನಲ್ಲಿ ಜಾಕ್ ಪಾಟ್ ಹೊಡೆದಿದ್ದಾರೆ.
ಜರ್ಮನಿಯಲ್ಲಿರುವ ವ್ಯಕ್ತಿಯೊಬ್ಬರು ಆನ್‌ಲೈನ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಿಚನ್ ಕಪಾಟು ಖರೀದಿಸಿದ್ದರು. ಇದರಲ್ಲಿ ಅವರು ಪೆಟ್ಟಿಗೆಯಲ್ಲಿಡಲಾಗಿದ್ದ 1.2 ಕೋಟಿ ರೂ. ಹಣವಿರುವುದನ್ನು ಕಂಡುಕೊಂಡಿದ್ದಾರೆ.
ಸಾಮಾಜಿಕ ವಸತಿ ಕಾರ್ಯಕರ್ತನಾಗಿ ಕೆಲಸ ಮಾಡುವ ಥಾಮಸ್ ಹೆಲ್ಲರ್, ಪೂರ್ವ ಜರ್ಮನಿಯ ಹೇಲ್‌ನಲ್ಲಿರುವ ವೃದ್ಧ ದಂಪತಿಗಳ ಮನೆ ಮಾರಾಟದಿಂದ ಅಡುಗೆ ಮನೆಯ ಕಪಾಟನ್ನು ಖರೀದಿಸಿದ್ದಾರೆ. 50 ವರ್ಷ ವಯಸ್ಸಿನ ಥಾಮಸ್ ಇ-ಬೇ ನಲ್ಲಿ ರೂ 19,480ಕ್ಕೆ ಖರೀದಿಸಿದ್ದಾರೆ.
ಬೀರುಗಳನ್ನು ಖರೀದಿಸಿದ ಕೆಲವೇ ದಿನಗಳಲ್ಲಿ, ಹೆಲ್ಲರ್ ಅದರೊಳಗೆ ಎರಡು ನಗದು ಪೆಟ್ಟಿಗೆಗಳಿರುವುದನ್ನು ಗಮನಿಸಿದ್ದಾನೆ. ಕೂಡಲೇ ಅದನ್ನು ತೆರೆದಾಗ ಕಂತೆ-ಕಂತೆ ನೋಟುಗಳು ಪತ್ತೆಯಾಗಿವೆ. ಈ ಮೂಲಕ ಥಾಮಸ್ ಲಾಟರಿ ಹೊಡೆದಿದ್ದಾನೆ. ಆದರೆ, ಅನಿರೀಕ್ಷಿತ ಜಾಕ್‌ಪಾಟ್ ಗೆದ್ದಿದ್ದರೂ, ಆತ ದುರಾಸೆ ಪಟ್ಟಿಲ್ಲ.
ಹೌದು, ಹಣವನ್ನು ತನ್ನ ಬಳಿ ಇಟ್ಟುಕೊಳ್ಳುವುದು ಸೂಕ್ತವಲ್ಲವೆಂದು ಹೆಲ್ಲರ್ ಈ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದನ್ನು ತಿಳಿದ ಪೊಲೀಸರು ಜಿಲ್ಲಾ ನ್ಯಾಯಾಲಯಕ್ಕೆ ವಿಷಯ ತಿಳಿಸಿದ್ದು, ನಿಜವಾದ ಮಾಲೀಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ. 91 ವರ್ಷದ ವೃದ್ಧೆಯೊಬ್ಬರು ಇಷ್ಟೊಂದು ಹಣವನ್ನು ಕಪಾಟಿನಲ್ಲಿ ಇಟ್ಟಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ಸಂಗ್ರಹಿಸಿದ ಹಣದ ಬಗ್ಗೆ ಅರಿವಿಲ್ಲದ ಆಕೆಯ ಮೊಮ್ಮಗ ಕಪಾಟುಗಳನ್ನು ಮಾರಿದ್ದಾನೆ.
ದೊಡ್ಡ ಮನಸ್ಸಿನ ಹೆಲ್ಲರ್, ಹಣವನ್ನು ತನ್ನ ಬಳಿ ಇಟ್ಟುಕೊಳ್ಳದೆ ನಿಜವಾದ ಮಾಲೀಕರಿಗೆ ಹಿಂದುರಿಗಿಸಲು ಪ್ರಯತ್ನಪಟ್ಟಿದ್ದಾನೆ. ಈ ಉತ್ತಮ ಕಾರ್ಯಕ್ಕೆ ಆತನಿಗೆ 3.6 ಲಕ್ಷ ರೂ. ಹಣವನ್ನು ಬಹುಮಾನ ರೂಪದಲ್ಲಿ ನೀಡಲಾಗಿದೆ.