ಭುವನೇಶ್ವರ: ಮದುವೆ ಮೆರವಣಿಗೆಯಲ್ಲಿ ಜೀವಂತ ನಾಗರಹಾವು ಬಳಸಿ ‘ಮೈನ್ ನಾಗಿನ್’ ಹಾಡಿಗೆ ನೃತ್ಯ ಪ್ರದರ್ಶಿಸಿದ ಐದು ಜನರನ್ನು ಒಡಿಶಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಇದು ದೇಶದಲ್ಲೇ ನಡೆದ ಮೊದಲ ಪ್ರಕರಣ ಎನ್ನಲಾಗುತ್ತಿದೆ.
ಹಾವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಹಾವು ಮೋಡಿಗಾರ ಸೇರಿದಂತೆ ಐದು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಯೂರ್‌ಭಂಜ್ ಜಿಲ್ಲೆಯ ಕರಂಜಿಯಾ ಪಟ್ಟಣದ ಬೀದಿಗಳಲ್ಲಿ ಬಾಡಿಗೆಗೆ ಪಡೆದ ಹಾವು ಇದ್ದ ಬಿದಿರಿನ ಬುಟ್ಟಿಯ ಮುಚ್ಚಳವನ್ನು ತೆರೆದು ಹಾವಿನ ಜೊತೆ ನೃತ್ಯ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಯಭೀತರಾದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಸಿಬ್ಬಂದಿಯೊಬ್ಬರು ಸ್ಥಳಕ್ಕಾಗಮಿಸಿ ನಾಗರ ಹಾವನ್ನು ರಕ್ಷಿಸಿದ್ದಾರೆ. ವಿಚಾರಣೆ ನಡೆಯುತ್ತಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1982ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
ವಿಡಿಯೋದಲ್ಲಿ ಹೆಚ್ಚಿನ ಡೆಸಿಬಲ್ ಸಂಗೀತದಿಂದ ಹಾವು ಭಯಗೊಂಡಂತೆ ಕಂಡುಬಂದಿದೆ. ಹಾವು ಮೋಡಿ ಮಾಡುವವರು ನಾಗರಹಾವಿನ ವಿಷಪೂರಿತ ಹಲ್ಲುಗಳನ್ನು ತೆಗೆದಿರಬೇಕು, ಇದು ಕಾನೂನುಬಾಹಿರವಾಗಿದೆ. ಇಂತಹ ಹೇಯ ಕೃತ್ಯಕ್ಕೆ ಅವಕಾಶ ನೀಡಿದವರ ಮತ್ತು ಅವರ ತಂದೆಯ ವಿರುದ್ಧ ಕಠಿಣ ಕ್ರಮಕ್ಕೆ ನಾನು ಒತ್ತಾಯಿಸುತ್ತೇನೆ ಎಂದು ಸ್ನೇಕ್ ಹೆಲ್ಪ್ ಲೈನ್ ಸಂಚಾಲಕ ಸುವೆಂದು ಮಲ್ಲಿಕ್ ಹೇಳಿದ್ದಾರೆ.