ಬೆಂಗಳೂರು: ಪಡಿತರ ವ್ಯವಸ್ಥೆಯಡಿ ಅಕ್ಕಿಯೊಂದಿಗೆ ಸಿರಿಧಾನ್ಯಗಳು, ಜೋಳ ಮತ್ತು ರಾಗಿಯನ್ನು ವಿತರಿಸಲು ಸರ್ಕಾರ ಚಿಂತನೆ ನಡೆಸಿದೆ.
ರಾಜ್ಯದ ಜನರ ಹಿತದೃಷ್ಟಿಯಿಂದ ಪಡಿತರ ಅಕ್ಕಿಯೊಂದಿಗೆ ಜೋಳ, ರಾಗಿ, ಸಿರಿಧಾನ್ಯ ವಿತರಿಸಲಾಗುವುದು. ಪ್ರಸ್ತುತ ಪಡಿತರ ಚೀಟಿದಾರರಿಗೆ ರಾಜ್ಯಸರ್ಕಾರ ಅಕ್ಕಿ, ಗೋಧಿ ಇಲ್ಲವೇ ರಾಗಿ ನೀಡುತ್ತಿದೆ. ಕೇಂದ್ರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ರಾಜ್ಯ ಸರ್ಕಾರ ನೀಡುತ್ತಿರುವ ಪಡಿತರದೊಂದಿಗೆ ಕೇಂದ್ರದ ಗರೀಬ್ ಕಲ್ಯಾಣ ಯೋಜನೆಯಡಿ ಅಕ್ಕಿ ಕೂಡ ಪಡಿತರ ಚೀಟಿದಾರರಿಗೆ ಸಿಗುತ್ತಿದ್ದು, ಇದರ ಜೊತೆಗೆ ರಾಗಿ-ಜೋಳ, ಸಿರಿಧಾನ್ಯಗಳನ್ನು ಸಮಪ್ರಮಾಣದಲ್ಲಿ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಅಕ್ಕಿ, ಗೋಧಿ ಜೊತೆಗೆ ಜೋಳ ಹಾಗೂ ಹಳೇ ಮೈಸೂರು ಭಾಗದಲ್ಲಿ ರಾಗಿ ಇಲ್ಲವೇ ನವಣೆ, ಸಜ್ಜೆ ವಿತರಿಸಲು ತಜ್ಞರು ಸಲಹೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಆಹಾರ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಅಕ್ಕಿ ಬಹುತೇಕ ಕುಟುಂಬಗಳಿಗೆ ಹೆಚ್ಚಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ನೀಡುವ ಬದಲು ರಾಗಿ-ಜೋಳ, ಸಿರಿಧಾನ್ಯಗಳನ್ನು ನೀಡುವುದರಿಂದ ಅನುಕೂಲವಾಗಲಿದೆ. ಆಹಾರ ಧಾನ್ಯಗಳ ಉತ್ಪಾದನೆ ಕೂಡ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಪಡಿತರ ಚೀಟಿದಾರರಿಗೆ ಅಕ್ಕಿಯೊಂದಿಗೆ ಸಿರಿಧಾನ್ಯ, ಜೋಳ, ರಾಗಿ ನೀಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.