ಲಕ್ನೋ: ನವಜಾತ ಶಿಶುವೊಂದು ಸ್ಟಾಫ್ ನರ್ಸ್ ಕೈಯಿಂದ ಜಾರಿ ನೆಲಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಲಕ್ನೋದ ಚಿನ್ಹಾಟ್ ನ ಮಲ್ಹೌರ್ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಹೆರಿಗೆಯ ನಂತರ ನರ್ಸ್ ಮಗುವನ್ನು ಟವೆಲ್ ನಲ್ಲಿ ಸುತ್ತಿಕೊಳ್ಳದೆ ಎತ್ತಿದಾಗ ಮಗು ಕೈಯಿಂದ ಜಾರಿ ಬಿದ್ದಿದೆ. ಆದರೆ ಮಗು ಹುಟ್ಟುವಾಗಲೇ ಸತ್ತು ಹೋಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿಕೆ ನೀಡಿದ್ದರಿಂದ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮಕ್ಕಳ ಸಾವನ್ನು ಹತ್ತಿಕ್ಕಲು ಸುಳ್ಳು ಕಥೆ ಹೆಣೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ಮಗುವಿನ ತಂದೆ ಜೀವನ್ ರಜಪೂತ್ ಅವರು ಚಿನ್ಹತ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕವಾಗಿ ದೂರು ನೀಡಿದ ನಂತರ ಪ್ರಕರಣ ದಾಖಲಿಸಲಾಗಿದೆ. ಘಟನೆಯ ನಂತರ ಅವರ ಪತ್ನಿ ಪೂನಂ ತೀವ್ರ ಆಘಾತಕ್ಕೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಜಪೂತ್ ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ನಂತರ ತಲೆಗೆ ಗಾಯವಾದ ಪರಿಣಾಮ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಪೊಲೀಸರು ನರ್ಸ್ ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಸ್ಪತ್ರೆಯ ಶಿಫಾರಸಿನ ಮೇರೆಗೆ ಘಟನೆ ನಡೆದ ದಿನವೇ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು ಎಂದು ತನಿಖಾಧಿಕಾರಿ ಅಭಿಷೇಕ್ ಪಾಂಡೆ ತಿಳಿಸಿದ್ದಾರೆ.
ಏಪ್ರಿಲ್ 19ರಂದು ತನ್ನ ಹೆಂಡತಿಗೆ ಹೆರಿಗೆ ನೋವು ಕಾಣಿಸಿಕೊಂಡು ರಾತ್ರಿ ಹೆರಿಗೆಯಾದಾಗ ಮಗು ಸತ್ತಿದೆ ಎಂದು ನನಗೆ ತಿಳಿಸಲಾಯಿತು. ಆದರೆ, ನನ್ನ ಪತ್ನಿಯನ್ನು ಮಾತನಾಡಿಸಿದಾಗ ಹೆರಿಗೆ ನಾರ್ಮಲ್ ಆಗಿದ್ದು, ಮಗು ಜೀವಂತವಾಗಿರುವುದನ್ನು ಕಂಡಿದ್ದೇನೆ. ನರ್ಸ್ ನನ್ನ ಮಗುವನ್ನು ಯಾವುದೇ ಟವೆಲ್ ಇಲ್ಲದೆ ತನ್ನ ಕೈಯಲ್ಲಿ ತೆಗೆದುಕೊಳ್ಳುತ್ತಿರುವುದನ್ನು ನೋಡಿದ್ದೇನೆ. ಮಗು ಕೈಯಿಂದ ಜಾರಿದಾಗ ನರ್ಸ್ ನನಗೆ ಹೇಳಿದರು. ಆಗ ನಾನು ಕಿರುಚಲು ಪ್ರಾರಂಭಿಸಿದಾಗ ನರ್ಸ್ ಮತ್ತು ಇತರ ಸಿಬ್ಬಂದಿಗಳು ಬಾಯಿಯನ್ನು ಮುಚ್ಚಿಕೊಳ್ಳುವಂತೆ ಬೆದರಿಕೆ ಹಾಕಿದರು ಎಂದು ಪತ್ನಿ ಹೇಳಿದ್ದಾರೆ ಎಂದು ರಜಪೂತ್ ತಿಳಿಸಿದರು.