ಉಗುರುಗಳ ಮೇಲೆ ಕಾಣಿಸಿಕೊಳ್ಳುವ ಬಿಳಿ ಮತ್ತು ಕಪ್ಪು ಗುರುತುಗಳನ್ನು ನಾವು ಅನೇಕ ಬಾರಿ ನಿರ್ಲಕ್ಷಿಸುತ್ತೇವೆ. ಆದ್ರೆ ಈ ಗುರುತುಗಳು ಅಪಾಯಕಾರಿ ಚರ್ಮದ ಕ್ಯಾನ್ಸರ್ನ ಸಂಕೇತವಾಗಿರಬಹುದು. ಇದಕ್ಕೆ ಸಾಕ್ಷಿಯಾಗಿ ನೈಜ ಘಟನೆಯೊಂದು ನಡೆದಿದೆ.
ಕೊಳಲು ವಾದಕಿ ಎಲಿಜಬೆತ್ ಮಿಸ್ಸೆಲ್ಬ್ರೂಕ್ ಎಂಬಾಕೆಗೂ ಇದೇ ರೀತಿ ಉಗುರಿನ ಮೇಲೆ ಕಪ್ಪನೆಯ ವಿಚಿತ್ರವಾದ ಗೆರೆ ಕಾಣಿಸಿಕೊಂಡಿತ್ತು. ಎಲಿಜಬೆತ್ ತಾಯಿ 2019ರಲ್ಲಿ ಮೊದಲು ಈ ಗೆರೆಗಳನ್ನು ಗಮನಿಸಿದ್ದಳು. ಕೂಡಲೇ ಚರ್ಮವೈದ್ಯರ ಬಳಿ ಕರೆದೊಯ್ದಿದ್ದಾರೆ. ತಪಾಸಣೆ ಮಾಡಿದ ವೈದ್ಯರು ಆತಂಕಪಡುವಂಥದ್ದೇನಿಲ್ಲ, 3 ತಿಂಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು.
ಉಗುರಿನ ಮೇಲೆ ಕಾಣಿಸಿಕೊಂಡಿದ್ದ ಆ ಗುರುತು ದಿನೇ ದಿನೇ ಬೆಳೆಯಲು ಪ್ರಾರಂಭಿಸಿತ್ತು. ಉಗುರು ತೆಗೆದು ಬಯಾಪ್ಸಿ ಮಾಡುವಂತೆ ವೈದ್ಯರು ಕೂಡ ಸೂಚಿಸಿದ್ರು. ಬಯಾಪ್ಸಿ ರಿಪೋರ್ಟ್ ಮಹಿಳೆ ಪಾಲಿಗೆ ನಿಜಕ್ಕೂ ಆಘಾತಕಾರಿ. ಉಗುರಿನ ಮೇಲಿದ್ದ ಆ ಕಪ್ಪನೆಯ ಗೆರೆ ಕ್ಯಾನ್ಸರ್ನ ಸಂಕೇತವಾಗಿತ್ತು. ಇದು ಮೆಲನೋಮ, ಹಂತ 1A ಎಂದು ಎಂದು ವೈದ್ಯರು ಸ್ಪಷ್ಟಪಡಿಸಿದ್ರು.
ಎಲಿಜಬೆತ್, ಅಕ್ರಾಲ್ ಲೆಂಟಿಜಿನಸ್ ಸಬ್ಂಗುಯಲ್ ಮೆಲನೋಮ ಎಂದು ಕರೆಯಲ್ಪಡುವ ಅಪರೂಪದ ಚರ್ಮದ ಕ್ಯಾನ್ಸರ್ನಿಂದ ಬಳಲುತ್ತಿದ್ಲು. ಎಲಿಜಬೆತ್ಗೆ ಶಸ್ತ್ರಚಿಕಿತ್ಸೆ ಮಾಡಿ ಬೆರಳುಗಳನ್ನೇ ಕತ್ತರಿಸಿ ಹಾಕಲಾಗಿದೆ. ಕೃತಕ ಬೆರಳುಗಳು ಸಿಕ್ಕರಷ್ಟೇ ಆಕೆ ಮತ್ತೆ ಕೊಳಲು ನುಡಿಸಲು ಸಾಧ್ಯ. ಹಾಗಾಗಿ ಉಗುರಿನ ಮೇಲೆ ಇಂತಹ ಗುರುತು ಕಂಡರೆ ನಿರ್ಲಕ್ಷಿಸದಂತೆ ಆಕೆ ಮನವಿ ಮಾಡಿದ್ದಾಳೆ.