ಕರಾಚಿ: ಕರಾಚಿ ವಿಶ್ವವಿದ್ಯಾಲಯದ ಆವರಣದಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟಿಸಿ ನಾಲ್ವರ ಹತ್ಯೆಗೆ ಕಾರಣವಾಗಿರುವ ಮಾನವ ಬಾಂಬರ್ ಶಾರಿ ಬಲೂಚ್ ನಿಜಕ್ಕೂ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾಳೆ ಎಂದು ಆಕೆಯ ಪತಿ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.
ಮೂವತ್ತರ ಹರೆಯದ ಮಹಿಳೆ ಶಾರಿ ಬಲೂಚ್ ಪತಿ ತನ್ನ ಪತ್ನಿಯ ಕುಕೃತ್ಯವನ್ನು ಮೆಚ್ಚಿಕೊಂಡಿದ್ದಾನೆಂದು ಅಫಘಾನಿಸ್ಥಾನದ ಪತ್ರಕರ್ತ ಬಶೀರ್ ಅಹ್ಮದ್ ಗ್ವಾಖ್ ಹೇಳಿದ್ದಾರೆ.
ಈ ಆತ್ಮಹತ್ಯಾ ಬಾಂಬರ್ ಪತಿ ಟ್ವೀಟ್ ಮಾಡಿದ್ದು, ಅದರಲ್ಲಿ “ಶಾರಿ ಜಾನ್, ನಿಸ್ವಾರ್ಥವಾಗಿ ನೀವು ಮಾಡಿದ ಕೆಲಸವು ನಮ್ಮನ್ನು ಮೂಕರನ್ನಾಗಿಯೂ, ಹೆಮ್ಮೆ ಪಡುವಂತೆಯೂ ಮಾಡಿದೆ. ತಮ್ಮ ತಾಯಿ ಎಷ್ಟು ಶ್ರೇಷ್ಠ ಮಹಿಳೆ ಎಂದು ತಿಳಿದು ನಿಮ್ಮ ಮಕ್ಕಳಾದ ಮೆಹ್ರೋಚ್ ಮತ್ತು ಮೀರ್ ಹಸನ್ ಕೂಡ ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ. ನಮ್ಮ ಜೀವನದಲ್ಲಿ ನಿಮಗೆ ಎಂದಿಗೂ ಮಹತ್ವದ ಸ್ಥಾನವಿದೆ” ಎಂದು ಹೇಳಲಾಗಿತ್ತು.
ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಾರಿ ಬಲೂಚ್, ಎಂಫಿಲ್ ಅಧ್ಯಯನವನ್ನೂ ಮಾಡುತ್ತಿದ್ದರು, ವಿಜ್ಞಾನ ಶಿಕ್ಷಕಿಯಾಗಿಯೂ ಕೆಲಸ ಮಾಡುತ್ತಿದ್ದರು. ಆಕೆಯ ಪತಿ ದಂತ ವೈದ್ಯನಾಗಿದ್ದನೆಂದು ತಿಳಿದು ಬಂದಿದೆ.