ಸಂತೋಷ್ ರೈ ಪಾತಾಜೆ ಅವರು, 2017ನೇ ಸಾಲಿನ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಡಾ. ರಾಜ್ ಕುಮಾರ್ ಜನ್ಮ ದಿನದಂದು 2017ನೇ ಸಾಲಿನ ಕರ್ನಾಟಕ ರಾಜ್ಯ ಚಲನ ಚಿತ್ರ ಪ್ರಶಸ್ತಿಯನ್ನು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರದಾನ ಮಾಡಿದ್ರು.
ಸೆವೆನ್ ಓ ಕ್ಲಾಕ್, ಸವಿ ಸವಿ ನೆನಪು ಚಿತ್ರವನ್ನು ನಿರ್ದೇಶನ ಮಾಡಿದ್ದ ಸಂತೋಷ್ ರೈ ಪಾತಾಜೆ ಅವರು ಸುಮಾರು 30ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಣ ಮಾಡಿದ್ದಾರೆ. ಮಠ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಛಾಯಾಗ್ರಹಕನಾಗಿ ಪ್ರವೇಶ ಮಾಡಿದ್ದ ಸಂತೋಷ್, ಪುನೀತ್ ರಾಜ್ ಕುಮಾರ್, ಗಣೇಶ್ ನಾಯಕ ನಟನಾಗಿ ಅಭಿನಯಿಸಿದ್ದ ಚಿತ್ರಗಳಲ್ಲಿ ತಮ್ಮ ಕೈಚಳಕವನ್ನು ತೋರಿಸಿದ್ದಾರೆ.
ಯೋಗರಾಜ್ ಭಟ್, ಇಂದ್ರಜಿತ್ ಲಂಕೇಶ್ ಮತ್ತು ಸಿಂಪಲ್ ಸುನಿ ಚಿತ್ರಗಳಿಗೂ ಸಂತೋಷ್ ರೈ ಪಾತಾಜೆಯವರ ಛಾಯಾಗ್ರಾಹಣ ಮಾಡಿದ್ದಾರೆ. ಸ್ಯಾಂಡಲ್ ವುಡ್ ಅಲ್ಲದೆ ತೆಲುಗು ಚಿತ್ರರಂಗದಲ್ಲೂ ಸಂತೋಷ್ ಸೈ ಎನಿಸಿಕೊಂಡಿದ್ದಾರೆ.
2005ರಿಂದ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆಯುತ್ತಿರುವ ಸಂತೋಷ್, ಮಿಠಾಯಿ ಮನೆ, ಜೋಶ್, ನೂರು ಜನ್ಮಕೂ, ದೇವ್ ಸನ್ ಆಫ್ ಮುದ್ದೇಗೌಡ, ಮಂದಹಾಸ, ನಮಸ್ತೆ ಮೇಡಮ್, ಲವ್ ಯೂ ಆಲಿಯಾ, ವಾಸ್ತು ಪ್ರಕಾರ, ಝೂಮ್, ಲಕ್ಷ್ಮಣ, ಪರಪಂಚ, ಜಾನ್ ಜಾನಿ ಜರ್ನಾದನ, ಚೌಕ ಚಿತ್ರಗಳಿಗೆ ಡಿಒಪಿ ಮಾಡಿದ್ದಾರೆ.
ಕರಾವಳಿ ಜಿಲ್ಲೆಯ ಪುತ್ತೂರು ತಾಲೂಕಿನ ಕಾಣಿಯೂರಿನ ಪಾತಾಜೆ ಸಂತೋಷ್ ರೈ ಅವರ ಹುಟ್ಟೂರು. ಎಸ್ ಎಸ್ ಎಲ್ ಸಿ ತನಕ ಹುಟ್ಟೂರಿನಲ್ಲೇ ವ್ಯಾಸಂಗ ಮಾಡಿದ್ದ ಸಂತೋಷ್ ಮಂಗಳೂರಿನ ಸಂತ ಆಲೋಷಿಯಶ್ ಕಾಲೇಜ್ನ ಹಳೆ ವಿದ್ಯಾರ್ಥಿ.
ಬೆಂಗಳೂರಿನ ಹೆಸರಘಟ್ಟದಲ್ಲಿ ಸಿನಿಮಾಟೊಗ್ರಾಫಿ ಕಾಲೇಜ್ ನಲ್ಲಿ ಕ್ಯಾಮರಾ ಕೈಚಳಕವನ್ನು ಕಲಿತುಕೊಂಡಿರುವ ಸಂತೋಷ್, ಅಶೋಕ್ ಕಶ್ಯಪ್ ಗರಡಿಯಲ್ಲಿ ಪಳಗಿದ್ರು. ಬಳಿಕ ನಿರ್ದೇಶನದತ್ತ ಒಲವು ತೋರಿದ್ರೂ ಚಿತ್ರ ನಿರ್ದೇಶನ ಸಂತೋಷ್ ಅವರ ಕೈ ಹಿಡಿಯಲಿಲ್ಲ. ನಂತರ ತಾನು ನಂಬಿದ್ದ ಕ್ಯಾಮೆರಾದಲ್ಲೇ ಹೊಸ ಹೊಸ ಪ್ರಯೋಗ, ತಂತ್ರಜ್ಞಾನಗಳನ್ನು ಕಲಿತುಕೊಂಡು ಇದೀಗ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ರೀತಿಯಲ್ಲಿ ಛಾಪು ಮೂಡಿಸುತ್ತಿದ್ದಾರೆ.