ಅಪ್ರಾಪ್ತರ ಲೈಂಗಿಕ ದೌರ್ಜನ್ಯ ಆರೋಪದಲ್ಲಿ, ಅಪ್ರಾಪ್ತರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾದರೆ, ಅಂತಹ ಪ್ರಕರಣಗಳಲ್ಲಿ ಪರಸ್ಪರ ರಾಜಿಯಾಗಲು ಮುಂದಾದ ಸಂದರ್ಭದಲ್ಲಿ ಅದನ್ನು ರದ್ದುಪಡಿಸುವ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಪ್ರಾಪ್ತ ಬಾಲಕನೊಬ್ಬನ ವಿರುದ್ಧ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಕರಣದ ಆರೋಪಿ ಹಾಗೂ ದೂರುದಾರರ ಪುತ್ರಿ ಇಬ್ಬರ ನಡುವಿನ ಸ್ನೇಹದ ಬಳಿಕ ದೂರು ದಾಖಲಾಗಿದ್ದು, ಪ್ರಕರಣವನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಕಕ್ಷಿದಾರರು ಬಯಸಿದ್ದಾರೆ. ಆದ್ದರಿಂದ ಪ್ರಕರಣಕ್ಕೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಹೈಕೋರ್ಟ್ ತಿಳಿಸಿದೆ.
ಇಲ್ಲಿದೆ ʼರಾಕಿಂಗ್ ಸ್ಟಾರ್ʼ ಯಶ್ ಕುರಿತ ಇಂಟ್ರಸ್ಟಿಂಗ್ ಮಾಹಿತಿ
ಅಪ್ರಾಪ್ತರ ಭವಿಷ್ಯದ ದೃಷ್ಟಿಯಿಂದ, ಸಮಾಲೋಚನೆ ನಡೆಸಿ ಪ್ರಕರಣವನ್ನು ಸುಖಾಂತ್ಯಗೊಳಿಸಲು ನಿರ್ಧರಿಸಲಾಗುವುದು ಎಂದು ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ. ಇದೇ ವೇಳೆ ಪೋಕ್ಸೋ ಕಾಯ್ದೆ ಅಡಿ ದಾಖಲಾಗಿರುವ ಅಪರಾಧ ಪ್ರಕರಣದಲ್ಲಿ ಸಂಧಾನಕ್ಕೆ ಅವಕಾಶವಿಲ್ಲ ಎಂದು ಪ್ರಾಸಿಕ್ಯೂಶನ್ ಪರ ವಕೀಲರು ತಿಳಿಸಿದ್ದಾರೆ.
ಕಾಲೇಜಿಗೆ ತೆರಳಿದ್ದ ಪುತ್ರಿ ಮನೆಗೆ ಹಿಂದಿರುಗಿಲ್ಲವೆಂದು ಅಪ್ರಾಪ್ತೆ ತಂದೆ ಕಳೆದ ವರ್ಷ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇರೆಗೆ ಬಾಲಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸುತ್ತಿದ್ದರು.