ಜಗತ್ತಿನ ದೊಡ್ಡ ಸಾಮಾಜಿಕ ಜಾಲತಾಣಗಳ ಪಟ್ಟಿಯಲ್ಲಿರುವ ಟ್ವೀಟರ್ ಅನ್ನು ಟೆಸ್ಲಾ ಕಂಪನಿ ಸಿಇಒ ಎಲಾನ್ ಮಸ್ಕ್ ಖರೀದಿಸಿದ ಬಳಿಕ ಅಮೆರಿಕಾ ಸರ್ಕಾರ ಕಳವಳ ಹೊರಹಾಕಿದೆ.
ಟ್ವಿಟರ್ ಅನ್ನು $44 ಶತಕೋಟಿಗೆ ಎಲಾನ್ ಮಸ್ಕ್ ಖರೀದಿಸಿದ್ದಾರೆ. ಈ ಖರೀದಿ ಒಪ್ಪಂದಿಂದಾಗಿ ಕೋಟ್ಯಂತರ ಬಳಕೆದಾರರು ಮತ್ತು ಜಾಗತಿಕ ನಾಯಕರಿರುವ ಸಾಮಾಜಿಕ ಮಾಧ್ಯಮ ವೇದಿಕೆಯ ನಿಯಂತ್ರವು ವಿಶ್ವದ ಶ್ರೀಮಂತ ವ್ಯಕ್ತಿಯ ಪಾಲಾಗಿದೆ.
ಸೋಮವಾರ ಶ್ವೇತಭವನದ ಪತ್ರಿಕಾ ಹೇಳಿಕೆಯ ಮೂಲಕ ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ಕಳವಳ ಪ್ರಕಟಗೊಂಡಿತು. ಅತೀ ದೊಡ್ಡ ಸಾಮಾಜಿಕ ಮಾಧ್ಯಮದ ಅಧಿಕಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ವೈಯಕ್ತಿಕ ವಹಿವಾಟಿನ ಬಗ್ಗೆ ವೈಟ್‌ಹೌಸ್ ಪ್ರತಿಕ್ರಿಯಿಸುವುದಿಲ್ಲ ಎಂದು ವಕ್ತಾರ ಜೆನ್ ಪ್ಸಾಕಿ ಹೇಳಿದರು. ಹಾಗೆಯೇ ನಮ್ಮ ಕಾಳಜಿ ಹೊಸದಲ್ಲ ಎಂದು ಎಚ್ಚರಿಕೆಯಾಗಿ ಪ್ರತಿಕ್ರಿಯೆ ನೀಡಿದರು.
ದೊಡ್ಡ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಶಕ್ತಿಯ ಬಗ್ಗೆ ಬಹಳ ಹಿಂದಿನಿಂದಲೂ ಕಾಳಜಿ ವಹಿಸುತ್ತಾರೆ, ನಮ್ಮ ದೈನಂದಿನ ಜೀವನದ ಮೇಲೆ ಹೊಂದಿರುವ ಶಕ್ತಿ ಅಂಥದ್ದು. ಟ್ವಿಟ್ಟರ್ ಅನ್ನು ಯಾರು ಹೊಂದಿದ್ದರೂ ಅಥವಾ ನಡೆಸುತ್ತಿದ್ದರೂ ಪರವಾಗಿಲ್ಲ ಎಂಬುದು ಅಮೆರಿಕಾ ಅಧ್ಯಕ್ಷರ ಅಭಿಪ್ರಾಯವಾಗಿದೆ.
ಟೆಕ್ ಪ್ಲಾಟ್‌ಫಾರ್ಮ್‌ಗಳು ಉಂಟುಮಾಡುವ ಹಾನಿಗೆ ಮುಖ್ಯಸ್ಥರು ಜವಾಬ್ದಾರರಾಗಿರಬೇಕು ಎಂದು ಅಧ್ಯಕ್ಷರು ಮುಂಚಿನಿಂದಲೂ ವಾದಿಸಿದ್ದಾರೆ ಎಂದು ವಕ್ತಾರರು ಹೇಳಿದರು.
ಇದೇ ವೇಳೆ, ಸಾಮಾಜಿಕ ಮಾಧ್ಯಮದಲ್ಲಿ ಮಸ್ಕ್ ಅವರ ಹೊಸ ಪಾತ್ರವು ಅವರ ರಾಜಕೀಯ ಒಲವು, ಸಾಂಸ್ಥಿಕ ಅಭ್ಯಾಸ ಮತ್ತು ವ್ಯಕ್ತಿತ್ವದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕುವುದು ಖಚಿತ ಎಂದು ಹೇಳಲಾಗುತ್ತಿದೆ.