ಸಾಮಾಜಿಕ ವೇದಿಕೆ ಟ್ವೀಟರನ್ನು ಕೊಂಡುಕೊಂಡ ಉದ್ಯಮಿ ಎಲೋನ್ ಮಸ್ಕ್, ತಮ್ಮಮೊದಲ ಟ್ವೀಟ್‌ನಲ್ಲಿ ಕುತೂಹಲಕಾರಿ ಸಂಗತಿ ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಟ್ವೀಟರ್ ವೇದಿಕೆಯನ್ನು ಇನ್ನಷ್ಟು ಉತ್ತಮಗೊಳಿಸಲು ಬಯಸಿರುವುದಾಗಿ ಹೇಳಿಕೊಂಡಿದ್ದಾರೆ.
ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಬಿಲಿಯನೇರ್ ಎಲೋನ್ ಮಸ್ಕ್ ಅವರು ವಾಕ್ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ತಳಹದಿ ಕುರಿತಂತೆಯೂ ಪ್ರತಿಕ್ರಿಯೆ ನೀಡಿದ್ದಾರೆ.
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡ ಎಲೋನ್ ಮಸ್ಕ್ ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಮಾಲೀಕತ್ವದ ಪೂರ್ಣ 100 ಪಾಲನ್ನು ಖರೀದಿಸಿದ್ದಾರೆ. $44 ಶತಕೋಟಿ ಒಪ್ಪಂದವನ್ನು ಮಂಗಳವಾರ ಮುಂಜಾನೆ ಅಂತಿಮಗೊಳಿಸಿದ ನಂತರ, ಎಲೋನ್ ಮಸ್ಕ್ ಟ್ವೀಟ್‌ನಲ್ಲಿ ತಮ್ಮಅಭಿಪ್ರಾಯ ದಾಖಲಿಸಿದರು.
ವಾಕ್ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ತಳಹದಿಯಾಗಿದೆ ಮತ್ತು ಟ್ವಿಟರ್ ಡಿಜಿಟಲ್ ಟೌನ್ ಸ್ಕ್ವೇರ್ ನಂತಿದ್ದು, ಇಲ್ಲಿ ಮಾನವೀಯತೆಯ ಭವಿಷ್ಯದ ವಿಷಯ ಚರ್ಚೆಯಾಗುತ್ತವೆ ಎಂದು ಎಲೋನ್ ಮಸ್ಕ್ ಒಪ್ಪಂದವನ್ನು ಪ್ರಕಟಿಸುವ ಅಂಶದ ಜೊತೆಗೇ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಇನ್ನಷ್ಟು ಹೊಸ ವೈಶಿಷ್ಟ್ಯಗಳೊಂದಿಗೆ ಟ್ವೀಟರನ್ನು ಉತ್ತಮಗೊಳಿಸುತ್ತೇವೆ. ನಂಬಿಕೆಯನ್ನು ಹೆಚ್ಚಿಸಲು ಅಲ್ಗಾರಿದಮ್‌ಗಳನ್ನು ಓಪನ್ ಸೋರ್ಸ್ ಆಗಿ ಮಾಡಲಾಗುತ್ತದೆ, ಸ್ಪ್ಯಾಮ್ ಬಾಟ್ ಹಿಮ್ಮೆಟ್ಟಿಸಲಾಗುತ್ತದೆ ಎಂದೂ ಸಹ ಅವರು ಹೇಳಿಕೊಂಡಿದ್ದಾರೆ.
ಟ್ವಿಟ್ಟರ್ ಪ್ರಚಂಡ ಸಾಮರ್ಥ್ಯ ಹೊಂದಿದೆ ಎಂದಿರುವ ಎಲೋನ್ ಮಸ್ಕ್, ಕಂಪನಿ ಮತ್ತು ಬಳಕೆದಾರ ಸಮುದಾಯದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಏಪ್ರಿಲ್ ಆರಂಭದಲ್ಲಿ ಎಲೋನ್ ಮಸ್ಕ್ ಟ್ವಿಟರ್‌ನಲ್ಲಿ 9.2 ಶೇಕಡಾ ಪಾಲನ್ನು ಖರೀದಿಸಿದರು ಮತ್ತು ಕಂಪನಿಯ ಎರಡನೇ ಅತಿ ದೊಡ್ಡ ಷೇರುದಾರರಾದರು. ಆದಾಗ್ಯೂ, ಅವರು ಕಂಪನಿಯ ಮಂಡಳಿಯ ಭಾಗವಾಗಲು ನಿರಾಕರಿಸಿದ್ದರು.
ಎಲೋನ್ ಮಸ್ಕ್ ಅವರೊಂದಿಗಿನ ಒಪ್ಪಂದವನ್ನು ಅಂತಿಮಗೊಳಿಸಿದ ನಂತರ ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಹೇಳಿಕೆ ನೀಡಿ, ಟ್ವಿಟ್ಟರ್ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುವ ಉದ್ದೇಶ ಮತ್ತು ಪ್ರಸ್ತುತತೆಯನ್ನು ಹೊಂದಿದೆ. ನಮ್ಮ ತಂಡಗಳ ಬಗ್ಗೆ ಹೆಮ್ಮೆ ಇದೆ ಎಂದಿದ್ದರು.