ಅಫ್ಘಾನಿಸ್ತಾನ ತಾಲಿಬಾನ್ ವಶವಾದ ಬಳಿಕ ಅಲ್ಲಿ ಚಿತ್ರವಿಚಿತ್ರ ಕಾನೂನುಗಳನ್ನು ಜಾರಿ ಮಾಡಲಾಗ್ತಿದೆ. ತಾಲಿಬಾನ್ ಉಗ್ರರು ಆಡಿದ್ದೇ ಆಟ ಎಂಬಂತಾಗಿದೆ. ಇದೀಗ ಕಾಬೂಲ್ ವಿಶ್ವವಿದ್ಯಾಲಯ ಮತ್ತು ಕಾಬೂಲ್ ಪಾಲಿಟೆಕ್ನಿಕ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ತರಗತಿ ನಡೆಸಲು ತಾಲಿಬಾನ್ ಫರ್ಮಾನು ಹೊರಡಿಸಿದೆ.
ತಾಲಿಬಾನಿಗಳ ಈ ನಿರ್ಧಾರಕ್ಕೆ ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸಕಾರಾತ್ಮಕ ದಿಕ್ಕಿನಲ್ಲಿರಬೇಕು. ಸರ್ಕಾರ ಹೊಸ ಸೌಲಭ್ಯಗಳೊಂದಿಗೆ ಹೊಸ ಅವಕಾಶ ಒದಗಿಸಬೇಕು. ಆದ್ರಿಲ್ಲಿ ತಾಲಿಬಾನಿ ಸರ್ಕಾರದಿಂದ ಅನಗತ್ಯ ಹಸ್ತಕ್ಷೇಪ ನಡೆಯುತ್ತಿದೆ ಎಂದು ವಿವಿ ಉಪನ್ಯಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ದಿನಕ್ಕೆ ಮೂರು ತರಗತಿಗಳಿತ್ತು. ಆದ್ರೆ ವಿದ್ಯಾರ್ಥಿನಿಯರನ್ನು ಪ್ರತ್ಯೇಕಿಸುವಂತೆ ಆದೇಶವಿರುವುದರಿಂದ 6 ತರಗತಿಗಳನ್ನು ನಡೆಸಬೇಕಾಗುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳು ಕೂಡ ಹೆಚ್ಚು ಸಮಯ ಮತ್ತು ಶ್ರಮವನ್ನು ಹಾಕಬೇಕು.
ಸರ್ಕಾರದ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ವಿರೋಧ ವ್ಯಕ್ತವಾಗುತ್ತಿದೆ. ಹೊಸ ವೇಳಾಪಟ್ಟಿಯಂತೆ ವಾರದ ಮೂರು ದಿನ ಹುಡುಗಿಯರು ವಿಶ್ವವಿದ್ಯಾಲಯಕ್ಕೆ ಹೋಗಬೇಕಾಗುತ್ತದೆ ಮತ್ತು ಉಳಿದ ಮೂರು ದಿನ ಹುಡುಗರು ತರಗತಿಗೆ ಹೋಗುತ್ತಾರೆ. ಪ್ರಸ್ತುತ ಎರಡು ವಿಶ್ವವಿದ್ಯಾನಿಲಯಗಳಿಗೆ ಈ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಮೇ ತಿಂಗಳಿನಿಂದ ಇದು ಅನ್ವಯವಾಗಲಿದೆ.