ಸ್ಪರ್ಧಾತ್ಮಕ ಪರೀಕ್ಷೆಗಳ ಸಾಲು ಸಾಲು ಅಕ್ರಮಗಳ ಬೆನ್ನಲ್ಲೆ, ಸರ್ಕಾರಿ ನೌಕರಿ ಕೊಡಿಸುವುದಾಗಿ ಆಮಿಷ ಒಡ್ಡಿ ಲಕ್ಷಗಟ್ಟಲೆ ಹಣ ಪಡೆದು ವಂಚಿಸಿರುವ ಪಾರ್ವತಿ ಎಂಬ ಕ್ಯಾಟರಿಂಗ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ವಂಚನೆಗೊಳಗಾದ ಲಗ್ಗೆರೆಯ 28 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ ಪಾರ್ವತಿ ಎಂಬ ಮಹಿಳೆಯನ್ನು ರಾಜಗೋಪಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ತನಗೆ ರಾಜಕೀಯ ವ್ಯಕ್ತಿಗಳ ಪರಿಚಯವಿರುವುದಾಗಿ ಹೇಳಿಕೊಂಡಿದ್ದ ಮಹಿಳೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಯುವತಿ ಮತ್ತು ಆಕೆಯ ಪೋಷಕರನ್ನು ನಂಬಿಸಿದ್ದಳು. ಇದನ್ನು ನಂಬಿದ ಪೋಷಕರು ಹಂತಹಂತವಾಗಿ 6 ಲಕ್ಷ ರೂಪಾಯಿಗಳನ್ನು ಮಹಿಳೆಗೆ ನೀಡಿದ್ದರು.
ಯುವತಿಯ ಕೆಲಸದ ವಿಚಾರವಾಗಿ ಪೋಷಕರು ಕರೆ ಮಾಡಿದರೆ ಮಹಿಳೆ ಕರೆ ಸ್ವೀಕರಿಸದಿದ್ದಾಗ, ಅನುಮಾನಗೊಂಡ ಪೋಷಕರು ತಮ್ಮ ಹಣವನ್ನು ಹಿಂದಿರುಗಿಸುವಂತೆ ಮಹಿಳೆಯನ್ನು ಒತ್ತಾಯಿಸಿದ್ದಾರೆ.
ಇದರಿಂದ ಕೋಪಗೊಂಡ ಮಹಿಳೆ, ಯುವತಿ ಮತ್ತು ಅವರ ಪೋಷಕರಿಗೆ ಕೊಲೆ ಬೆದರಿಕೆ ಹಾಕಿದ್ದಾಳೆ. ಇದರಿಂದ ಬೇಸತ್ತ ಯುವತಿ ಮತ್ತು ಆಕೆಯ ಪೋಷಕರು ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಮಹಿಳೆಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.