ಭೋಜ್ ಪುರ : ಬಿಹಾರದ ಭೋಜ್ ಪುರ ಜಿಲ್ಲೆಯಲ್ಲಿ ಶನಿವಾರ ದಲೌರ್ ಮೈದಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ 78,220 ಜನರು ಏಕಕಾಲದಲ್ಲಿ ರಾಷ್ಟ್ರಧ್ವಜವನ್ನು ಬೀಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಇದಕ್ಕೂ ಮೊದಲು, ಪಾಕಿಸ್ತಾನವು ಸುಮಾರು 18 ವರ್ಷಗಳ ಹಿಂದೆ ಲಾಹೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ 56,000 ಪಾಕಿಸ್ತಾನಿಗಳು ತಮ್ಮ ರಾಷ್ಟ್ರಧ್ವಜವನ್ನು ಬೀಸುವ ವಿಶ್ವದಾಖಲೆಯನ್ನು ನಿರ್ಮಿಸಿತ್ತು. ಇದೀಗ ಪಾಕ್ ದಾಖಲೆಯನ್ನು ಭಾರತ ಮುರಿದು ಇತಿಹಾಸ ಸೃಷ್ಟಿಸಿದ್ದು, ಈ ಸಂದರ್ಭದಲ್ಲಿ ಜಗದೀಶ್ಪುರದಲ್ಲಿ ಐದು ನಿಮಿಷಗಳ ಕಾಲ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.
ಏಪ್ರಿಲ್ 23 ರಂದು ಜಗದೀಶ್ ಪುರದಲ್ಲಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಬಾಬು ವೀರ್ ಕುನ್ವರ್ ಸಿಂಗ್ ಅವರ ಜನ್ಮದಿನ ಪ್ರಯುಕ್ತ ಏರ್ಪಡಿಸಿದ್ದ ಆಜಾದಿ ಕಾ ಅಮೃತ್ ಮಹೋತ್ಸವ ಎಂಬ ‘ವಿಜಯೋತ್ಸವ ಕಾರ್ಯಕ್ರಮದಲ್ಲಿ’ ಜನರು ಧ್ವಜವನ್ನು ಬೀಸಿದರು ಎಂದು ರಾಜ್ಯ ಗೃಹ ವ್ಯವಹಾರಗಳ ಕೇಂದ್ರ ಸಚಿವ ನಿತ್ಯಾನಂದ ರೈ ತಿಳಿಸಿದರು.