ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿರುವ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ. ಅನ್ಯಪಕ್ಷಗಳ 10 ಕ್ಕೂ ಅಧಿಕ ಶಾಸಕರು ಬಿಜೆಪಿ ಸೇರ್ಪಡೆಗೊಳ್ಳಲು ರೆಡಿಯಾಗಿದ್ದು, ಅವರುಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರದಂದು ನಡೆದ ಬಿಜೆಪಿ ಉತ್ತರ ಜಿಲ್ಲಾ ಘಟಕದ ಪ್ರಮುಖರ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಳೆ ಮೈಸೂರು ಭಾಗದ ಹಲವು ಶಾಸಕರುಗಳು ಬಿಜೆಪಿ ಸೇರ್ಪಡೆಗೆ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಿದರು.
ಇನ್ನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 50 ಕ್ಷೇತ್ರಗಳಲ್ಲಿ ಸ್ವಾಮೀಜಿಗಳು ಸ್ಪರ್ಧಿಸಲಿದ್ದಾರೆ ಎಂಬ ಧರ್ಮಸ್ಥಳದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಅದರ ಬಗ್ಗೆ ನನಗೆ ಅರಿವಿಲ್ಲ. ಆದರೆ ಈ ಕುರಿತು ಸ್ವಾಮೀಜಿ ಅವರ ಜೊತೆ ಚರ್ಚಿಸುವೆ ಎಂದು ತಿಳಿಸಿದರು.