ಮಂಗಳೂರು ಸೌತೆಕಾಯಿ ಸಾಂಬಾರ್ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ನಾವಿಂದೂ ಅದೇ ಮಂಗಳೂರು ಸೌತೆಕಾಯಿ ಬಳಸಿ ಸರಳ ವಿಧಾನದಲ್ಲಿ ತಯಾರಿಸಬಹುದಾದ ಚಟ್ನಿಯನ್ನು ತಿಳಿಸಿಕೊಡುತ್ತಿದ್ದೇವೆ. ಆಂಧ್ರಪ್ರದೇಶದ ಸಾಂಪ್ರದಾಯಿಕ ಚಟ್ನಿಗಳಲ್ಲಿ ಇದು ಕೂಡ ಒಂದು.
ಮೊದಲಿಗೆ ಒಂದು ಮಂಗಳೂರು ಸೌತೆಕಾಯಿಯನ್ನು ಸಿಪ್ಪೆ ತೆಗೆದು, ಸಣ್ಣ ಹೋಳುಗಳಾಗಿ ಹೆಚ್ಚಿಟ್ಟುಕೊಳ್ಳಬೇಕು.
ಈಗ ಸ್ಟೌ ಆನ್ ಮಾಡಿ, ಒಂದು ಬಾಣಲಿ ಇಟ್ಟು 2 ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಇದಕ್ಕೆ 3 ಟೇಬಲ್ ಸ್ಪೂನ್ನಷ್ಟು ಕಡಲೇಬೀಜ ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ 4-5 ಹಸಿಮೆಣಸಿನಕಾಯಿ ಸೇರಿಸಿ ಸ್ವಲ್ಪ ಮೆತ್ತಗಾಗುವವರೆಗೆ ಹುರಿದುಕೊಳ್ಳಬೇಕು.
ಈಗ ಒಂದು ದೊಡ್ಡ ಕುಟ್ಟಾಣಿ ತೆಗೆದುಕೊಂಡು ಇದನ್ನು ಜಜ್ಜಿಕೊಳ್ಳಬೇಕು. ಒಂದು ವೇಳೆ ಕುಟ್ಟಾಣಿ ಇಲ್ಲದಿದ್ದರೆ ಮಿಕ್ಸಿ ಜಾರಿಗೆ ಹಾಕಿಕೊಳ್ಳಬಹುದು.
ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ: ವರ್ಗಾವಣೆ ರದ್ದುಗೊಳಿಸಲು ವಿದ್ಯಾರ್ಥಿನಿಯರನ್ನೇ ಒತ್ತೆಯಾಗಿರಿಸಿದ ಶಿಕ್ಷಕಿಯರು…!
ಈಗ ಕುಟ್ಟಾಣಿಗೆ ಫ್ರೈ ಮಾಡಿಕೊಂಡ ಕಡಲೇಬೀಜ, ಹಸಿಮೆಣಸಿನಕಾಯಿ ಜೊತೆಗೆ 7- 8 ಬೆಳ್ಳುಳ್ಳಿ ಎಸಳು, ಒಂದು ಟೀ ಸ್ಪೂನ್ ಜೀರಿಗೆ ಕಾಳು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಜಜ್ಜಿಕೊಳ್ಳಬೇಕು. ಬಳಿಕ ನಿಂಬೆ ಗಾತ್ರದಷ್ಟು ಹುಣಸೇ ಹಣ್ಣು ಸೇರಿಸಿ ಮತ್ತೆ ಜಜ್ಜಿಕೊಳ್ಳಬೇಕು.
ಮಿಕ್ಸಿಯಲ್ಲಿ ಮಾಡುವುದಾದರೇ ನೀರನ್ನು ಸೇರಿಸದೇ ರುಬ್ಬಿಕೊಳ್ಳಬೇಕು. ಈಗ ಈ ಜಜ್ಜಿಕೊಂಡ ಮಿಶ್ರಣಕ್ಕೆ ಕತ್ತರಿಸಿಟ್ಟುಕೊಂಡ ಸೌತೆಕಾಯಿ ಹೋಳುಗಳನ್ನು ಹಾಕಿ ಜಜ್ಜಿಕೊಳ್ಳಬೇಕು. ಸೌತೆಕಾಯಿಯನ್ನು ನುಣ್ಣಗೆ ಜಜ್ಜಿಕೊಳ್ಳದೇ ತಿನ್ನುವಾಗ ಕಾಯಿ ಸಿಗುವಂತೆ ಕುಟ್ಟಿಕೊಳ್ಳಬೇಕು.
ನಂತರ ಒಂದು ಬಾಣಲ್ಲಿ ಇಟ್ಟು 2 ಸ್ಪೂನ್ ಎಣ್ಣೆ ಹಾಕಿ, ಒಂದು ಚಮಚ ಕಡ್ಲೇಬೇಳೆ, ಒಂದು ಚಮಚ ಉದ್ದಿನ ಬೇಳೆ, ಅರ್ಧ ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ ಸೇರಿಸಿ ಬಾಡಿಸಿಕೊಳ್ಳಿ. ಬಳಿಕ 2 ಒಣ ಮೆಣಸಿನಕಾಯಿ, ಕರಿಬೇವು ಸೇರಿಸಿ ಫ್ರೈ ಮಾಡಿಕೊಂಡು ಸ್ಟೌ ಆಫ್ ಮಾಡಿ.
ಈಗ ಜಜ್ಜಿಕೊಂಡಿರುವ ಸೌತೆಕಾಯಿ ಮಿಶ್ರಣವನ್ನು ಒಗ್ಗರಣೆಗೆ ಸೇರಿಸಿ ಮಿಕ್ಸ್ ಮಾಡಿದರೇ ಆಂಧ್ರ ಸ್ಪೆಷಲ್ ಮಂಗಳೂರು ಸೌತೆಕಾಯಿ ಚಟ್ನಿ ಸವಿಯಲು ಸಿದ್ಧ. ಇದನ್ನು ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ತಿಂದರೆ ಬಲು ರುಚಿ, ದೋಸೆ, ಇಡ್ಲಿಗೂ ಒಳ್ಳೆಯ ಕಾಂಬಿನೇಷನ್.