ಬೆಂಗಳೂರು: ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ B.A.2ಗೆ ಸೇರಿದ ಎರಡು ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದೆ. ಇದು ಕೊರೊನಾ 4ನೇ ಅಲೆಗೆ ನಾಂದಿ ಹಾಡುವ ಆತಂಕ ಎದುರಾಗಿದೆ.
ಬೆಂಗಳೂರಿನಲ್ಲಿ B.A2ಗೆ ಸೇರಿದ ಎರಡು ರೂಪಾಂತರಿ ವೈರಸ್ ಪ್ರಕರಣ ಪತ್ತೆಯಾಗಿದ್ದು B.A.2.10 ಹಾಗೂ B.A 2.12 ವೈರಸ್ ಗಳು ಕಾಣಿಸಿಕೊಂಡಿವೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ದೇಶದಲ್ಲಿ ಕೋವಿಡ್ 4ನೇ ಅಲೆ ಆರಂಭವಾಗಿದೆ. ಇನ್ನು ಎರಡು ವಾರಗಳಲ್ಲಿ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದ್ದು, 3-4 ವಾರಗಳಲ್ಲಿ ಕೊರೊನಾ 4ನೇ ಅಲೆ ರಾಜ್ಯದಲ್ಲಿ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ. ಈಗ ಪತ್ತೆಯಾಗಿರುವ B.A.2 ರೂಪಾಂತರಿ ವೈರಸ್ ನಾಲ್ಕನೇ ಅಲೆ ಆರಂಭಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ. ಕೋವಿಡ್ 3ನೇ ಅಲೆಯಲ್ಲಿ ಸೋಂಕಿತರಲ್ಲಿ ಕಂಡುಬಂದ ಗುಣಲಕ್ಷಣಗಳೇ ನಾಲ್ಕನೇ ಅಲೆಯಲ್ಲಿಯೂ ಇರಲಿದೆ ಆದರೆ ಸೋಂಕು ವ್ಯಾಪಕವಾಗಿ ಹರಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜನರು ಈಗಿನಿಂದಲೇ ಜಾಗೃತಿ ವಹಿಸುವ ಅಗತ್ಯವಿದೆ. ಜ್ವರ, ನೆಗಡಿ, ಕೆಮ್ಮಿನಂತಹ ಲಕ್ಷಣ ಕಂಡುಬಂದರೆ ನಿರ್ಲಕ್ಷ ಬೇಡ. ವಿಶೇಷವಾಗಿ ಹೃದಯ, ಶ್ವಾಸಕೋಶ ಸಮಸ್ಯೆ, ಕ್ಯಾನ್ಸರ್ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳಿರುವವರು ಅತ್ಯಂತ ಜಾಗರೂಕರಾಗಿರಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಿ. ಜ್ವರ, ಕೆಮ್ಮಿನ ಬಗ್ಗೆ ನಿರ್ಲಕ್ಷ್ಯವಹಿಸದೇ ತಕ್ಷಣ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.