ಕಲಬುರ್ಗಿ: 545 ಪಿಎಸ್ ಐ ಹುದ್ದೆ ನೇಮಕಾತಿಯಲ್ಲಿ ಅಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ಆಡಿಯೋ ಬಿಡುಗಡೆ ಮಾಡಿರುವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ, ಸರ್ಕಾರಕ್ಕೆ ಮಾಹಿತಿ ಇದ್ದೇ ಅಕ್ರಮವೆಸಗಲಾಗಿದೆ. ಆಡಿಯೋ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಗೃಹ ಸಚಿವ ಅರಗ ಜ್ಞಾನೇಂದ್ರ ಮೊದಲು ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು. ಇಷ್ಟು ದೊಡ್ಡ ಮಟ್ಟದಲ್ಲಿ ಅಕ್ರಮ ನಡೆದಿದ್ದರೂ ಯಾವುದೇ ಸಮಸ್ಯೆಯಾಗಿಲ್ಲ ಎಂಬಂತೆ ಹೇಳಿಕೆ ಕೊಡುತ್ತಿದ್ದಾರೆ. ಸಣ್ಣ ಮೀನುಗಳನ್ನು ಹಿಡಿದಿದ್ದಾರೆ. ದೊಡ್ಡ ದೊಡ್ಡ ತಿಮಿಂಗಲುಗಳನ್ನು ಬಿಟ್ಟಿದ್ದಾರೆ. ಅಕ್ರಮದ ಹಣ ಮೇಲ್ಮಟ್ಟದವರೆಗೆ ಹೋಗುತ್ತಿದೆ ಎಂದು ಕಿಡಿ ಕಾರಿದರು.
ಪಿ ಎಸ್ ಐ ನೇಮಕಾತಿ ಅಕ್ರಮದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಕೂಡ ಶಾಮೀಲಾಗಿದ್ದಾರೆ ಎಂದಿರುವ ಖರ್ಗೆ, ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಆಡಿಯೋದಲ್ಲಿರುವ ವ್ಯಕ್ತಿ ಈಗಾಗಲೇ ಪಿ ಎಸ್ ಐ ಸಮವಸ್ತ್ರ ಧರಿಸಿ ಭಾಷಣ ಮಾಡಿದ್ದಾನೆ. ಕರೆ ಮಾಡಿದ ವ್ಯಕ್ತಿಗೆ ಪಿ ಎಸ್ ಐ ಸಾಹೇಬ್ರೆ ಎಂದು ಹೇಳುತ್ತಾನೆ. ತಾತ್ಕಾಲಿಕ ಪಟ್ಟಿ ಪ್ರಕಟವಾದರೂ ಇದೇ ಫೈನಲ್ ಎನ್ನುತ್ತಾನೆ. ಆರ್ಟಿಕಲ್ 371ರ ಬಗ್ಗೆಯೂ ಉಡಾಫೆ ಮಾತುಗಳನ್ನಾಡಿದ್ದಾನೆ. ಯಾರಾದ್ರೂ ಕೋರ್ಟ್ ಮೆಟ್ಟಿಲೇರಿದರೆ ಏನು ಮಾಡುವುದು ಎಂದು ಅಭ್ಯರ್ಥಿ ಕೇಳುತ್ತಾನೆ. 402 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದೂ ಅದಕ್ಕೂ ಫಿಕ್ಸ್ ಆಗಿದೆ ಎಂದು ತಿಳಿಸುತ್ತಾರೆ. ಆಡಿಯೋದಲ್ಲಿರುವ ಈ ಇಬ್ಬರು ವ್ಯಕ್ತಿಗಳು ಯಾರು? ಎಂದು ಪ್ರಶ್ನಿಸಿದ್ದಾರೆ.
ಗುಡ್ ನ್ಯೂಸ್: UAE ನಲ್ಲೂ ಮಾಡಬಹುದು ಯುಪಿಐ ಪಾವತಿ
ಮತ್ತೋರ್ವ ಸರ್ಕಾರಕ್ಕೆ ಮಾಹಿತಿ ನೀಡಿಯೇ ಅಕ್ರಮವೆಸಗಿದ್ದಾನೆ. ಆಯ್ಕೆಯಾದ ಅಭ್ಯರ್ಥಿಗಳು ಬಿಜೆಪಿ ಶಾಸಕರಿಗೆ ಅಭಿನಂದಿಸಿದ್ದಾರೆ. ಅವರ ಜತೆಗಿನ ಫೋಟೋ ಅಪ್ ಲೋಡ್ ಮಾಡಿದ್ದಾರೆ. 545 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೆಲಸ ಕೊಟ್ಟು, 402 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹುಡುಕುವಂತೆ ಸೂಚಿಸಿದ್ದಾರೆ ಆಡಿಯೋದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕಲಬುರ್ಗಿ ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರ ಬ್ಲಾಕ್ ಲಿಸ್ಟ್ ನಲ್ಲಿದೆ. ಇದು ಪರೀಕ್ಷಾ ಕೇಂದ್ರಕ್ಕೆ ಯೋಗ್ಯವಾಗಿಲ್ಲ ಎಂದು ಈ ಹಿಂದೆಯೇ ವರದಿ ಕೂಡ ನೀಡಲಾಗಿತ್ತು. ಆದಾಗ್ಯೂ ಅಲ್ಲಿ ಪಿ ಎಸ್ ಐ ಹುದ್ದೆ ನೇಮಕಾತಿ ಪರೀಕ್ಷೆ ನಡೆಸಲು ಅನುಮತಿ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರ ಉದ್ದೇಶಪೂರ್ವಕವಾಗಿ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿಯನ್ನು ರಕ್ಷಿಸುತ್ತಿದ್ದಂತೆ ಕಂಡುಬರುತ್ತಿದೆ ಎಂದು ವಾಗ್ದಾಳಿ ನಡೆಸಿದರು.