ಆಗ್ರಾ: ರಾಜಾ ಕಿ ಮಂಡಿ ರೈಲ್ವೇ ನಿಲ್ದಾಣದಲ್ಲಿರುವ ಮಂದಿರವೊಂದನ್ನು ಸ್ಥಳಾಂತರಿಸಲು ರೈಲ್ವೇ ಅಧಿಕಾರಿಗಳು ಆದೇಶ ಹೊರಡಿಸಿರುವ ಬೆನ್ನಲ್ಲೇ ಭಕ್ತರು, ಹಿಂದೂ ಸಂಘಟನೆಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಲ್ದಾಣದಲ್ಲಿರುವ ಚಾಮುಂಡಾ ದೇವಿ ಮಂದಿರವನ್ನು 10 ದಿನಗಳ ಒಳಗೆ ಸ್ಥಳಾಂತರಿಸುವಂತೆ ಅಧಿಕಾರಿಗಳು ದೇವಸ್ಥಾನದ ಸಮಿತಿಗೆ ಸೂಚಿಸಿದೆ. ಬ್ರಿಟಿಷ್ ಪೂರ್ವ ಕಾಲದಿಂದಲೂ ಅಸ್ತಿತ್ವದಲ್ಲಿರುವ ಈ ದೇವಸ್ಥಾನವು ರಾಜಾ ಕಿ ಮಂಡಿ ರೈಲ್ವೇ ಸ್ಟೇಷನ್ಗೆ ತಾಗಿಕೊಂಡೇ ಇದೆ. ನಗರದ ಆಸ್ತಿಕ ಜನರಿಗೆ ಶ್ರದ್ಧೆಯ ತಾಣವೂ ಆಗಿದೆ.
ಬ್ರಿಟಿಷ್ ಅಧಿಕಾರಿಗಳೂ ಇದನ್ನು ಸ್ಥಳಾಂತರಿಸಲು ಪ್ರಯತ್ನಿಸಿದ್ದರು, ಆದರೆ ಸಾಧ್ಯವಾಗಿರಲಿಲ್ಲ. ಹೀಗಾಗಿ, ದೇವಸ್ಥಾನದ ಪ್ರಾಂಗಣದ ಪಕ್ಕದಲ್ಲೇ ರೈಲ್ವೇ ಮಾರ್ಗವನ್ನು ನಿರ್ಮಿಸಲಾಯಿತು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ದೇವಸ್ಥಾನವು ರೈಲ್ವೇಗೆ ಸೇರಿದ ಜಾಗದಲ್ಲಿರುವುದರಿಂದ ಅದನ್ನು ಸ್ಥಳಾಂತರಿಸುವಂತೆ 2011ರಲ್ಲೂ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದಕ್ಕೆ ಆಡಳಿತ ಮಂಡಳಿಯು ಪ್ರತಿಕ್ರಿಯಿಸಿದ್ದರಿಂದ ಪರಿಶೀಲನೆಗೆ ಒಂದು ಸಮಿತಿಯನ್ನು ರಚಿಸಲಾಗಿತ್ತು. ಅದರ ಶೋಧನೆಗಳ ಪ್ರಕಾರ ರೈಲ್ವೇ ಮಾರ್ಗ ನಿರ್ಮಾಣಕ್ಕೂ ಪೂರ್ವದಲ್ಲೇ ದೇವಸ್ಥಾನವು ಅಸ್ತಿತ್ವದಲ್ಲಿತ್ತೆಂದು, ಹೀಗಾಗಿ ಅತಿಕ್ರಮಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದೂ ತಿಳಿಸಿತ್ತು.
ಇಷ್ಟೆಲ್ಲ ಸ್ಪಷ್ಟೀಕರಣಗಳ ಬಳಿಕವೂ ರೈಲ್ವೇ ಅಧಿಕಾರಿಗಳು ದೇವಸ್ಥಾನ ಸ್ಥಳಾಂತರಿಸುವಂತೆ ನೋಟಿಸ್ಗಳನ್ನು ನೀಡುತ್ತಲೇ ಇದ್ದಾರೆ. ಇದರಿಂದ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವಾಗಿದೆ. ಹೀಗಾಗಿ, ಈ ಸಮಸ್ಯೆಯನ್ನು ಪರಿಹರಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಮನವಿ ಮಾಡುತ್ತಿರುವುದಾಗಿ ದೇವಸ್ಥಾನದ ಪ್ರಧಾನ ಅರ್ಚಕ ನಂದಗಿರಿ ಮಹಾರಾಜ್ ತಿಳಿಸಿದ್ದಾರೆ.