ಉಡುಪಿ: ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ಕೊನೆ ಕ್ಷಣದಲ್ಲಿ ಹಾಲ್ ಟಿಕೆಟ್ ಪಡೆದು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ಇಬ್ಬರು ಹಿಜಾಬ್ ಹೋರಾಟಗಾರ್ತಿಯರು, ಪರೀಕ್ಷೆ ಬರೆಯದೆಯೇ ಮನೆಗೆ ವಾಪಸ್ ತೆರಳಿದ್ದಾರೆ.
ಇಂದು ಕಾಮರ್ಸ್ ವಿಭಾಗದ ಪರೀಕ್ಷೆ ನಡೆಯುತ್ತಿದ್ದು, 6 ಹಿಜಾಬ್ ಹೋರಾಟಗಾರ್ತಿಯರ ಪೈಕಿ ಇಬ್ಬರು ವಿದ್ಯಾರ್ಥಿನಿಯರಾದ ಆಲಿಯಾ ಅಸ್ಸಾದಿ ಹಾಗೂ ರೇಷಂ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಮುಂದಾಗಿದ್ದರು. ಕೊನೆ ಕ್ಷಣದಲ್ಲಿ ಹಾಲ್ ಟಿಕೆಟ್ ಪಡೆದುಕೊಂಡ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೊಡುವಂತೆ ಉಡುಪಿ ವಿದ್ಯೋದಯ ಕಾಲೇಜು ಪ್ರಾಂಶುಪಾಲರಿಗೆ ಮನವಿ ಮಾಡಿದ್ದರು.
ಆದರೆ ಯಾವುದೇ ಧಾರ್ಮಿಕ ಚಿಹ್ನೆ, ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಹೈಕೋರ್ಟ್ ಆದೇಶವಿರುವ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಹಾಗೂ ತಹಶೀಲ್ದಾರ್ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆದು ಪರೀಕ್ಷೆ ಬರೆಯುವಂತೆ ತಿಳಿಸಿದ್ದಾರೆ. ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೇ ಪರೀಕ್ಷಾ ಕೇಂದ್ರದಿಂದ ವಾಪಸ್ ಮನೆಗೆ ತೆರಳಿದ್ದಾರೆ ಎಂದು ತಿಳಿದಿಬಂದಿದೆ.