ಗುವಾಹಾಟಿ: ಟ್ವೀಟ್ ಒಂದಕ್ಕೆ ಸಂಬಂಧಿಸಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಆಸ್ಸಾಂ ಪೊಲೀಸರು ಬಂಧಿಸಿದ್ದು, ಮೇವಾನಿ ಯಾರೆಂದು ತಮಗೆ ಗೊತ್ತಿಲ್ಲ ಎಂದು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಗುರುವಾರ ಪ್ರತಿಕ್ರಿಯಿಸಿದ್ದಾರೆ.
ಕಾರ್ಯಕ್ರಮವೊಂದರ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಮೇವಾನಿ ಯಾರೆಂದು ತಮಗೆ ತಿಳಿದಿಲ್ಲ. ಅವರು ಯಾರು ? ಎಂದು ಮರುಪ್ರಶ್ನೆ ಎಸೆದರು. ಬಂಧನದ ಕುರಿತು ಪ್ರಶ್ನಿಸಿದಾಗಲೂ, ನನಗೇನೂ ತಿಳಿದಿಲ್ಲ ಎಂದು ಪ್ರತಿಕ್ರಿಯಿಸಿದರು.
ಮೇವಾನಿ ಅವರನ್ನು ಗುಜರಾತ್ ರಾಜ್ಯದ ಪಾಲನ್‌ಪುರ ಪಟ್ಟಣದಿಂದ ಬುಧವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ. ಐಪಿಸಿ ಮತ್ತು ಐಟಿ ಕಾಯ್ದೆಯ ವಿವಿಧ ಪ್ರಕರಣಗಳಲ್ಲಿ ಕೊಕ್ರಾಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ಪೊಲೀಸರು ಅವರನ್ನು ಬಂಧಿಸಿ, ಗುವಾಹಾಟಿಗೆ ಕರೆತಂದಿದ್ದಾರೆ. ಬಳಿಕ ರಸ್ತೆ ಮೂಲಕ ಅವರನ್ನು ಕೊಕ್ರಾಜಾರ್‌ಗೆ ಕರೆದೊಯ್ಯಲಾಗಿದೆ.
ಪ್ರಧಾನಿ ಮೋದಿಯವರು ಗೋಡ್ಸೆ ಅವರನ್ನು ದೇವರೆಂದು ಭಾವಿಸಿದ್ದಾರೆ ಎಂದು ವಡಂಗಾಮ್ ಕ್ಷೇತ್ರದ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಟ್ವೀಟ್ ಮಾಡಿದ್ದರು. ಮೋದಿಯವರು ಗುಜರಾತ್ ಭೇಟಿ ವೇಳೆ ಕೋಮು ಸಾಮರಸ್ಯಕ್ಕೆ ಮನವಿ ಮಾಡಬೇಕೆಂದು ಹೇಳುವಾಗಲೂ ಅವರು ಇದೇ ಟ್ವೀಟ್ ಬಳಸಿದ್ದರು.