ಕೋಲ್ಕತ್ತಾ: ದೆಹಲಿಯ ಜಹಾಂಗೀರ್ ಪುರಿಯಲ್ಲಿ ಅಕ್ರಮ ಕಟ್ಟಡಗಳ ಧ್ವಂಸ ಅಭಿಯಾನ ನಡೆಸಿದ ಕೇಸರಿ ಪಕ್ಷದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಹರಿಹಾಯ್ದಿದ್ದಾರೆ.
ಬಿಜೆಪಿಯ ಈ ಕೃತ್ಯದ ಕುರಿತು ಕಿಡಿಕಾರಿದ ಅವರು, ನಾವು ಹೊಡೆದುರುಳಿಸಲು ಬಯಸುವುದಿಲ್ಲ. ನಾವು ಜನರನ್ನು ವಿಭಜಿಸಲು ಇಷ್ಟಪಡುವುದಿಲ್ಲ. ಅದರ ಬದಲು ಜನರನ್ನು ಒಂದುಗೂಡಿಸಲು ಬಯಸುತ್ತೇವೆ ಎಂದು ಹೇಳಿದರು. ಇನ್ನು ಮುಂದುವರೆದು ಏಕತೆ ನಮ್ಮ ಶಕ್ತಿ, ಒಗ್ಗಟ್ಟಿನಿಂದ ಇದ್ದರೆ ಮಾತ್ರ ನಾವು ಸಾಂಸ್ಕೃತಿಕವಾಗಿ ಪ್ರಬಲವಾಗಲು ಸಾಧ್ಯ. ಆದರೆ ವಿಭಜಿಸಲು ಹೋದರೆ ಸೋಲು ಖಂಡಿತ ಎಂದು ಎಚ್ಚರಿಸಿದ್ದಾರೆ.
ಏತನ್ಮಧ್ಯೆ, ಇತ್ತೀಚೆಗೆ ಕೋಮುಗಲಭೆಯಿಂದ ತತ್ತರಿಸಿರುವ ದೆಹಲಿಯ ಜಹಾಂಗೀರ್ ಪುರಿ ಪ್ರದೇಶಕ್ಕೆ ಶುಕ್ರವಾರ ಮಹಿಳಾ ಸತ್ಯಶೋಧನಾ ತಂಡವನ್ನು ಕಳುಹಿಸಲು ತೃಣಮೂಲ ಕಾಂಗ್ರೆಸ್ ನಾಯಕತ್ವ ನಿರ್ಧರಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಟಿಎಂಸಿಯ ಆರು ಸದಸ್ಯರ ಸತ್ಯಶೋಧನಾ ತಂಡದಲ್ಲಿ ಕಾಕೋಲಿ ಘೋಷ್ ದಸ್ತಿದಾರ್, ಸತಾಬ್ದಿ ರಾಯ್, ಮಾಲಾ ರಾಯ್, ಪ್ರತಿಮಾ ಮೊಂಡಲ್, ಸಜ್ದಾ ಅಹ್ಮದ್ ಮತ್ತು ಅಪಾರ ಪೊದ್ದಾರ್ ಇದ್ದಾರೆ.